ರಂಗ ವಿಧಾತ ಭರತ್ ಎಸ್ ಕರ್ಕೇರರಿಗೆ ರಾಷ್ಟ್ರ ಮಟ್ಟದ “ಕಲಾವಿಭೂಷಣ” ಗೌರವ ಪ್ರಶಸ್ತಿ

0
65

ಮಂಗಳೂರು ತಾಲೂಕು ಕಂದಾವರ ಪದವು ನಿವಾಸಿ ಖ್ಯಾತ ನಾಟಕಕಾರ, ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಭರತ್ ಎಸ್. ಕರ್ಕೇರ ಅವರು ರಾಷ್ಟ್ರಮಟ್ಟದ ಪ್ರತಿಷ್ಠಿತ “ಕಲಾವಿಭೂಷಣ ಪ್ರಶಸ್ತಿ – 2026” ಗೆ ಆಯ್ಕೆಯಾಗಿದ್ದಾರೆ.

ಭಾರತದ ಮಹಾನ್ ತತ್ವಜ್ಞಾನಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ, ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.), ನಾಗರಮುನ್ನೋಳಿ ಇವರ ವತಿಯಿಂದ ಈ ಗೌರವ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಶೈಲಿಯೊಂದಿಗೆ ಸಾಹಿತ್ಯ, ನಾಟಕ ಹಾಗೂ ಸಮಾಜಮುಖಿ ಬರಹಗಳ ಮೂಲಕ ಸಾಮಾಜಿಕ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸಿರುವ ಹಿರಿಮೆ ಭರತ್ ಎಸ್. ಕರ್ಕೇರರದ್ದು. ಬೀದಿನಾಟಕ, ರಂಗನಾಟಕ ಹಾಗೂ ಆಪ್ತ ರಂಗಭೂಮಿಯಲ್ಲೂ ಕಲಾವಿದರಾಗಿ ಸಕ್ರಿಯವಾಗಿ ತೊಡಗಿಸಿಕೊಂಡು, ಕಲಾಮಾತೆಯ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕಲಾವಿದರಿಗೆ ಪ್ರೇರಣೆಯಾಗಿರುವ ಅವರು, ಕಲಾ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಅವರ ಈ ಗಣನೀಯ ಸೇವೆಯನ್ನು ಗುರುತಿಸಿ ಕಲಾವಿಭೂಷಣ ಪ್ರಶಸ್ತಿ – 2026 ನೀಡಲಾಗುತ್ತಿದೆ. ಈ ಗೌರವವು ಕಲಾ ವಲಯದಲ್ಲಿ ಸಂತಸ ಮತ್ತು ಹೆಮ್ಮೆಯ ವಾತಾವರಣವನ್ನು ಸೃಷ್ಟಿಸಿದೆ.

ಜನವರಿ 25 ರಂದು ಬೆಳಗಾವಿ ಜಿಲ್ಲೆಯ ನಾಗರಮುನ್ನೋಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಭರತ್ ಎಸ್. ಕರ್ಕೇರರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಈ ಗೌರವ ಪ್ರಶಸ್ತಿಗೆ ಭಾಜನರಾದ ಭರತ್ ಎಸ್. ಕರ್ಕೇರರಿಗೆ ವಿವಿಧ ಸಂಘ–ಸಂಸ್ಥೆಗಳು, ಕಲಾಭಿಮಾನಿಗಳು ಹಾಗೂ ಬಂಧು–ಮಿತ್ರರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here