ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಮೇ 7, 8 ಮತ್ತು 9 ರಂದು ವಿಶ್ವವಿದ್ಯಾನಿಲಯದ ಡಾ. ಯು ಆರ್ ರಾವ್ ಸಭಾಂಗಣದಲ್ಲಿ ‘ಕನ್ನಡ ಮಾಧ್ಯಮ ಕ್ಷೇತ್ರ-ಅವಕಾಶಗಳು ಮತ್ತು ಕೌಶಲಗಳು’ ಎಂಬ ವಿಷಯಾಧಾರಿತವಾಗಿ ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರವು ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯ (ಪಿ ಎಂ ಉಷಾ) ಪ್ರಾಯೋಜಕತ್ವದಲ್ಲಿ ನಡೆಯಲಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲಿದ್ದಾರೆ.
ಮೇ 7 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿರುವ ಪ್ರೊ. ನಿರಂಜನ ವಾನಳ್ಳಿ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿರುವ ಪ್ರೊ. ಪಿ. ಎಲ್. ಧರ್ಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕುಲಸಚಿವರಾಗಿರುವ ರಾಜು ಮೊಗವೀರ ಇವರು ಶುಭಾಶಂಸನಾ ನುಡಿಗಳನ್ನಾಡಲಿದ್ದು ಪಿ ಎಂ ಉಷಾ ಯೋಜನೆಯ ಸಂಯೋಜಕರಾಗಿರುವ ಪ್ರೊ. ಎ.ಎಂ. ಖಾನ್ ಅವರು ಉಪಸ್ಥಿತರಿರುವರು.
ಕಾರ್ಯಾಗಾರದ ಅಂಗವಾಗಿ ಮೊದಲ ದಿನ ಪ್ರೊ. ನಿರಂಜನ ವಾನಳ್ಳಿ ಇವರು ‘ನುಡಿಚಿತ್ರ ಸ್ವರೂಪ ಮತ್ತು ಬರವಣಿಗೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ನಂತರ ‘ಬರವಣಿಗೆಯ ಭಾಷೆ ಮತ್ತು ಸಂವೇದನೆ’ ಎಂಬ ವಿಷಯದ ಬಗೆಗೆ ಅಂಕಣಕಾರರು ಮತ್ತು ವಿಶ್ರಾಂತ ಪ್ರಾಧ್ಯಾಪಕರಾಗಿರುವ ಡಾ. ನರೇಂದ್ರ ರೈ ದೇರ್ಲ, ‘ಪತ್ರಿಕಾ ಛಾಯಾಗ್ರಹಣ-ಇಂದಿನ ಸವಾಲುಗಳು’ ಎಂಬ ವಿಷಯದ ಬಗೆಗೆ ಹಿರಿಯ ಪತ್ರಿಕಾ ಛಾಯಾಗ್ರಾಹಕರೂ ಲಲಿತಕಲಾ ಅಕಾಡೆಮಿ ಸದಸ್ಯರೂ ಆಗಿರುವ ಆಸ್ಟ್ರೋ ಮೋಹನ್, ‘ಪುಸ್ತಕ ಪ್ರಕಾಶನ ಸೌಲಭ್ಯ ಮತ್ತು ಸವಾಲುಗಳು’ ಎಂಬ ವಿಷಯದಲ್ಲಿ ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ಅವರು ಮಾತನಾಡಲಿದ್ದಾರೆ.
ಮೇ 8 ರಂದು ‘ಪುರವಣಿ ಮತ್ತು ಸಂದರ್ಶನ ಬರವಣಿಗೆ’ ಎಂಬ ವಿಷಯದಲ್ಲಿ ಹಿರಿಯ ಪತ್ರಕರ್ತೆಯಾಗಿರುವ ಕೋಡಿಬೆಟ್ಟು ರಾಜಲಕ್ಷ್ಮಿ, ‘ವರದಿ ತಯಾರಿ ಸ್ವರೂಪ ಮತ್ತು ವೈವಿಧ್ಯ’ ಎಂಬ ವಿಷಯದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿರುವ ಪಿ.ಬಿ.ಹರೀಶ್ , ‘ಮಾಧ್ಯಮ: ಬಹು ಕೌಶಲ್ಯದ ಅಗತ್ಯ’ ಎಂಬ ವಿಷಯದ ಮೇಲೆ ಪ್ರಸಿದ್ಧ ನಟ, ನಿರೂಪಕ, ಹಿನ್ನಲೆ ಧ್ವನಿ ಕಲಾವಿದರಾಗಿರುವ ಬಡೆಕ್ಕಿಲ ಪ್ರದೀಪ, ‘ಆಕಾಶವಾಣಿ ಅವಕಾಶಗಳು’ ಎಂಬ ವಿಷಯದ ಮೇಲೆ ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿರುವ ಸೂರ್ಯನಾರಾಯಣ ಭಟ್, ‘ಬಾನುಲಿ ಬರವಣಿಗೆಯ ವೈಶಿಷ್ಟ್ಯಗಳು’ ಎಂಬ ವಿಷಯದ ಮೇಲೆ ಆಕಾಶವಾಣಿಯ ಪ್ರಸಾರ ನಿರ್ವಾಹಕರಾಗಿರುವ ಲತೀಶ್ ಪಾಲ್ದನೆ ಮಾತನಾಡಲಿದ್ದಾರೆ.
ಕೊನೆಯ ದಿನವಾದ ಮೇ 9 ರಂದು ‘ಡಿಜಿಟಲ್ ಮೀಡಿಯಾ’ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಹಿಂದುಸ್ತಾನ್ ಟೈಮ್ಸ್ ಕನ್ನಡ ಜಾಲತಾಣದ ಸಂಪಾದಕರಾಗಿರುವ ಡಿ. ಎಂ. ಘನಶ್ಯಾಮ, ‘ಗ್ರಾಮೀಣ ಪತ್ರಿಕೋದ್ಯಮದ ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಬಗ್ಗೆ ಪುತ್ತೂರಿನ ಸುದ್ದಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಡಾ. ಶಿವಾನಂದ, ‘ದೃಶ್ಯ ಮಾಧ್ಯಮ ಅವಕಾಶ ಮತ್ತು ತಯಾರಿ’ ಎಂಬ ವಿಷಯದ ಬಗ್ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ತಾರಾನಾಥ ಗಟ್ಟಿ ಕಾಪಿಕ್ಕಾಡ್, ‘ಪತ್ರಿಕಾ ಲೇಖನ ಬರವಣಿಗೆಯ ಸೂಕ್ಷ್ಮಗಳು’ ಎಂಬ ವಿಷಯದ ಬಗ್ಗೆ ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸಿಬಂತಿ ಪದ್ಮನಾಭ ಇವರು ಉಪನ್ಯಾಸ ನೀಡಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿರುವ ಪ್ರೊ. ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆಯನ್ನು ವಹಿಸಲಿದ್ದು ಡಾ. ಸಿಬಂತಿ ಪದ್ಮನಾಭ ಅವರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಗಳಾಗಿರುವ ಪ್ರೊ. ವೈ. ಸಂಗಪ್ಪ ಮತ್ತು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ವಸಂತ ಕೊಣಾಜೆ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಹಲವು ಮಜಲುಗಳಲ್ಲಿ ಪತ್ರಿಕೋದ್ಯಮದ ಆಳ-ಅಗಲವನ್ನು ತಿಳಿಯಲು ಸಹಕಾರಿಯಾಗಿದ್ದು ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಕಾರ್ಯಾಗಾರದ ಸಂಚಾಲಕ ಡಾ.ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.