ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ

0
14

ಕದಿರು ಕಟ್ಟುವಿಕೆ, ವಿವಿಧ ಧಾರ್ಮಿಕ ಪೂಜೆ, ನೃತ್ಯಸೇವೆಯೊಂದಿಗೆ ಉತ್ಸವದ ಆರಂಭ

ಉಡುಪಿ : ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ರವಿವಾರ ನವರಾತ್ರಿ ಮಹೋತ್ಸವಕ್ಕೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು. ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ವೇ. ಮೂ. ಸರ್ವೇಶ ತಂತ್ರಿ, ವೇ. ಮೂ. ವಿಖ್ಯಾತ್ ಭಟ್ ಹಾಗೂ ಗಣೇಶ ಸರಳಾಯ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಪ್ರಾತಃಕಾಲ ಮಂಗಳವಾದ್ಯಗಳೊಂದಿಗೆ ಕದಿರನ್ನು ಕ್ಷೇತ್ರಕ್ಕೆ ಬರಮಾಡಿಕೊಂಡು ಪೂಜೆ ನೆರವೇರಿಸಲಾಯಿತು. ಬಳಿಕ ಸಾನ್ನಿಧ್ಯಕ್ಕೆ ಕದಿರು ಕಟ್ಟಿದ ಅನಂತರ ಭಕ್ತರಿಗೆ ವಿತರಿಸಲಾಯಿತು. ಆದ್ಯ ಗಣಪತಿಯಾಗ, ನವಕ ಕಲಶ ಪ್ರಧಾನ ಹೋಮ ಹಾಗೂ ಕಲಶಾಭಿಷೇಕ ನಡೆಯಿತು. ವಿಘ್ನೇಶ್ ಕೊಕ್ಕರ್ಣೆ ಮತ್ತು ಮನೆಯವರು, ಜಲಜಾಕ್ಷಿ ನಿಟ್ಟೂರು ಮತ್ತು ಮನೆಯವರಿಂದ ಚಂಡಿಕಾಯಾಗಗಳು, ಬೆಂಗಳೂರಿನ ಸಂಚಿತಾ ಶೆಟ್ಟಿ ಮತ್ತು ಮನೆಯವರಿಂದ ದುರ್ಗಾ ನಮಸ್ಕಾರ ಪೂಜೆ ಹಾಗೂ ಶ್ರೀರಂಗಪೂಜೆ ನೆರವೇರಿದವು.

ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾಕಷ್ಟು ಭಕ್ತರು ಮೃಷ್ಟಾನ್ನ ಅನ್ನಪ್ರಸಾದ ಸ್ವೀಕರಿಸಿದರು. ದೇವಿಯ ಸಾನ್ನಿಧ್ಯದಲ್ಲಿ ದ್ವಿತಿ, ಸ್ತುತಿ, ಸವಿ, ಲಕ್ಷ್ಮೀ, ವಿಭಾ, ಪ್ರೇಕ್ಷಾ, ಶ್ರೇಯಾ ಸೇರಿದಂತೆ ನೃತ್ಯಾರ್ಥಿಗಳು ನೃತ್ಯಸೇವೆ ಸಮರ್ಪಿಸಿದರು. ನವಶಕ್ತಿ ವೇದಿಕೆಯಲ್ಲಿ ಪ್ರಜ್ಞಾ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆದವು.
ಕ್ಷೇತ್ರದಲ್ಲಿ ನವರಾತ್ರಿಯ ಮೊದಲ ದಿನವೇ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದ ವಾತಾವರಣ ನಿರ್ಮಿಸಿದವು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಆಚಾರ್ಯ ತಿಳಿಸಿದ್ದಾರೆ.

ನಿರಂತರ 11 ದಿನಗಳ ಅನ್ನಸಂತರ್ಪಣೆಗೆ ಚಾಲನೆ

ಕ್ಷೇತ್ರದಲ್ಲಿ ನಿರಂತರ 11 ದಿನಗಳ ಕಾಲ ನಡೆಯಲಿರುವ ಅನ್ನಸಂತರ್ಪಣೆಗೆ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಚಾಲನೆ ನೀಡಿದರು. ಭಕ್ತರಿಗೆ ಸ್ವತಃ ಅನ್ನ ಮತ್ತು ಸಾರು ಬಡಿಸುವ ಮೂಲಕ ಅನ್ನಸೇವೆಗೆ ಶುಭಾರಂಭ ಮಾಡಿದರು.

ಭಕ್ತಿಭಾವದ ಅಕ್ಕಿ ಸೇವೆ ಸಮರ್ಪಣೆ

ಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸಿದ ಭಕ್ತರು ದುರ್ಗಾ ಆದಿಶಕ್ತಿ ದೇವಿಯ ವಿಶೇಷ ಅನುಗ್ರಹಕ್ಕಾಗಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದ ಅಕ್ಕಿ ಹುಂಡಿಗೆ ಸರತಿ ಸಾಲಿನಲ್ಲಿ ಸಾಗಿ ಅಕ್ಕಿ ಸಮರ್ಥಿಸಿ ಕ್ಷೇತ್ರದ ಮೃಷ್ಟಾನ್ನ ಸಂತರ್ಪಣೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ವಿಶೇಷತೆಯಾಗಿದೆ.