ತುಮಕೂರು : ಹೊಸ ಬೈಕ್ ಖರೀದಿಸಿದ ಸಂತಸ ಕೇವಲ ಒಂದೇ ದಿನಕ್ಕೆ ಸೀಮಿತವಾಗಿ, ಮರುದಿನವೇ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕ ಜೀವ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ಸಂಭವಿಸಿದೆ.
ಮೃತ ಯುವಕನನ್ನು ನಂದೀಶ್ ಕುಮಾರ್ (19) ಎಂದು ಗುರುತಿಸಲಾಗಿದ್ದು, ಆತ ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ.
ಮಾಹಿತಿಯ ಪ್ರಕಾರ, ನಂದೀಶ್ ಕುಮಾರ್ ನಿನ್ನೆಯಷ್ಟೇ ಹೊಸ ಬೈಕ್ ಖರೀದಿಸಿದ್ದ. ಇಂದು ಸ್ನೇಹಿತನೊಂದಿಗೆ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ, ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಂದೀಶ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

