ಯುಪಿಐ ಪಾವತಿಯಲ್ಲಿ ಹೊಸ ಶುಲ್ಕ ವ್ಯವಸ್ಥೆ: ಸುಪ್ರೀಂನಲ್ಲಿ ವಿಚಾರಣೆ

0
13

ನವದೆಹಲಿ : ₹2,000ಕ್ಕೂ ಅಧಿಕ ಮೊತ್ತದ ಆಯ್ದ ಯುಪಿಐ ವರ್ತಕ ಪಾವತಿಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (ಎಂಡಿಆರ್) ವಿಧಿಸುವ ಹೊಸ ವ್ಯವಸ್ಥೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ ಈ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹಾಗೂ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ)ಗೆ ನೋಟಿಸ್ ಜಾರಿಗೊಳಿಸಿ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿ. ಮೋಹನ್ ಅವರನ್ನೊಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಿತು.

ಹೊಸ ವ್ಯವಸ್ಥೆಯ ಪ್ರಕಾರ, ಅ.15, 2026ರಿಂದ ₹2,000ಕ್ಕೂ ಅಧಿಕ ಮೊತ್ತದ ಸಾಮಾನ್ಯ ಪರ್ಸನ್-ಟು-ಮರ್ಚೆಂಟ್ (P2M) ಯುಪಿಐ ವಹಿವಾಟುಗಳಿಗೆ ಶೇ.0.4ರಷ್ಟು ಎಂಡಿಆರ್ ಅನ್ವಯವಾಗಲಿದೆ. ₹10,000 ಪಾವತಿಗೆ ₹40 ಎಂಡಿಆರ್ ಆಗಲಿದ್ದು, ₹75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಗರಿಷ್ಠ ₹300ಕ್ಕೆ ಶುಲ್ಕ ಸೀಮಿತವಾಗಲಿದೆ.

ಈ ಶುಲ್ಕವನ್ನು ಗ್ರಾಹಕರಿಂದ ಪ್ರತ್ಯೇಕವಾಗಿ ವಸೂಲಿ ಮಾಡುವಂತಿಲ್ಲ. ಎಂಡಿಆರ್‌ ವ್ಯಾಪಾರಿಗಳು ಹಾಗೂ ಪಾವತಿ ವ್ಯವಸ್ಥೆಯ ಭಾಗವಹಿಸುವವರ ನಡುವಿನ ಶುಲ್ಕವಾಗಿದ್ದು, ಸಾಮಾನ್ಯ ಗ್ರಾಹಕರ ಯುಪಿಐ ಬಳಕೆಗೆ ನೇರ ಶುಲ್ಕ ವಿಧಿಸುವ ವ್ಯವಸ್ಥೆ ಇಲ್ಲ ಎಂದು ಸರ್ಕಾರ ಹಾಗೂ ಎನ್‌ಪಿಸಿಐ ಸ್ಪಷ್ಟಪಡಿಸಿವೆ.

ಯಾರಿಗೆ ಶುಲ್ಕ ಅನ್ವಯಿಸುವುದಿಲ್ಲ?

ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ (P2P) ಯುಪಿಐ ಹಣ ವರ್ಗಾವಣೆಗಳಿಗೆ ಯಾವುದೇ ಮೊತ್ತದ ಮೇಲೂ ಎಂಡಿಆರ್ ಇರುವುದಿಲ್ಲ. ₹2,000ವರೆಗಿನ ಸಾಮಾನ್ಯ ವರ್ತಕ ಪಾವತಿಗಳಿಗೂ ಎಂಡಿಆರ್ ಅನ್ವಯಿಸುವುದಿಲ್ಲ. ತಿಂಗಳಿಗೆ ₹1 ಲಕ್ಷದವರೆಗೆ ಯುಪಿಐ ಕ್ಯೂಆರ್ ಮೂಲಕ ಪಾವತಿ ಸ್ವೀಕರಿಸುವ ಅರ್ಹ ಸಣ್ಣ ವ್ಯಾಪಾರಿಗಳಿಗೆ ಕೂಡ ವಿನಾಯಿತಿ ನೀಡಲಾಗಿದೆ.

ವಿಶೇಷ ವಲಯಗಳಿಗೆ ಪ್ರತ್ಯೇಕ ದರ

ರೈಲ್ವೆ, ದೂರಸಂಪರ್ಕ, ವಿಮೆ ಮತ್ತು ಇಂಧನ ಸೇರಿದಂತೆ ಕೆಲವು ನಿರ್ದಿಷ್ಟ ವಲಯಗಳಲ್ಲಿ ₹2,000ಕ್ಕೂ ಅಧಿಕ ಪಾವತಿಗಳಿಗೆ ₹5ರ ನಿಗದಿತ ಎಂಡಿಆರ್ ಅನ್ವಯವಾಗಲಿದೆ. ಬಂಡವಾಳ ಮಾರುಕಟ್ಟೆ ಸಂಬಂಧಿತ ಕೆಲವು ಪಾವತಿಗಳಿಗೆ ಶೇ.0.02ರಷ್ಟು ದರ ನಿಗದಿಪಡಿಸಲಾಗಿದೆ.

ಕೇಂದ್ರ ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಮಣನ್, ಎಂಡಿಆರ್ ಸರ್ಕಾರ ಸಂಗ್ರಹಿಸುವ ತೆರಿಗೆ ಅಥವಾ ಶುಲ್ಕವಲ್ಲ; ಇದು ಬ್ಯಾಂಕ್‌ಗಳು, ಪಾವತಿ ಸೇವಾ ಸಂಸ್ಥೆಗಳು ಮತ್ತು ತಾಂತ್ರಿಕ ಜಾಲದ ನಡುವೆ ಹಂಚಿಕೆಯಾಗುವ ಪಾವತಿ ಸಂಸ್ಕರಣಾ ವೆಚ್ಚ ಎಂದು ನ್ಯಾಯಾಲಯಕ್ಕೆ ತಿಳಿಸಿದರು.