ಆಶಯ ಸಹಕಾರಿ ಸಂಘದ ಬೆಳವಣಿಗೆಗೆ ಹೊಸ ವೇಗ

0
7

ರೂ 300 ಕೋಟಿ ವ್ಯವಹಾರ, ಆಧುನಿಕ ಸೌಲಭ್ಯಗಳು, ಸದಸ್ಯರ ಹಿತದೃಷ್ಟಿಯಿಂದ ಹಲವು ಹೊಸ ಯೋಜನೆಗಳಿಗೆ ಚಾಲನೆ

ಮೂಡಬಿದ್ರೆ: ಆಶಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಹದಿಮೂರನೇ ಸಾಮಾನ್ಯ ಮಹಾಸಭೆ ಹಾಗೂ ಹನ್ನೆರಡನೇ ವಾರ್ಷಿಕ ಮಹಾಸಭೆಯು ಶುಕ್ರವಾರ ಸಂಜೆ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶ್ರೀ ಎಂ. ಕೆ. ಸುವ್ರತ್ ಕುಮಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯ ಕಳೆದ 12–13 ವರ್ಷಗಳ ಪಯಣ, ಸಾಧನೆಗಳು, ಸದಸ್ಯರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಮುಂದಿನ ಯೋಜನೆಗಳ ಕುರಿತು ವಿವರಿಸಿದರು.

ಸಣ್ಣ ಸಹಕಾರಿ ಸಂಸ್ಥೆಯಾಗಿ ಆರಂಭಗೊಂಡ ಆಶಯ ಇಂದು ಕಾರ್ಕಳ ಮತ್ತು ಮೂಡಬಿದ್ರೆಯಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡಿದೆ. ಸದಸ್ಯರು, ಷೇರುದಾರರು, ನಿರ್ದೇಶಕರು ಹಾಗೂ ಸಿಬ್ಬಂದಿಯ ನಿರಂತರ ಸಹಕಾರದಿಂದ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದೆ ಎಂದು ಶ್ರೀ ಎಂ. ಕೆ. ಸುವ್ರತ್ ಕುಮಾರ್ ತಿಳಿಸಿದರು.

ಕಾರ್ಕಳ ಶಾಖೆಯ ಸ್ವಂತ ಕಟ್ಟಡ ಸಂಸ್ಥೆಯ ಬೆಳವಣಿಗೆಯ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಹಲವು ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ್ದ ಸಂಸ್ಥೆಯು ಮಾರ್ಚ್ 9, 2026ರಂದು ಕಾರ್ಕಳದಲ್ಲಿ ತನ್ನದೇ ಆದ ನೂತನ ಕಟ್ಟಡವನ್ನು ಉದ್ಘಾಟಿಸಿತ್ತು. ಸುಮಾರು 3,200 ಚದರ ಅಡಿ ವಿಸ್ತೀರ್ಣ ಹೊಂದಿರುವ ಕಟ್ಟಡದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಚಲನ ಸಂವೇದಕಗಳು, ಬಲಿಷ್ಠ ಸುರಕ್ಷತಾ ಕೊಠಡಿ ಸೇರಿದಂತೆ ಉತ್ತಮ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂಡಬಿದ್ರೆ ಶಾಖೆಗೂ ಇದೇ ರೀತಿಯ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸುವ ಆಶಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ಸದಸ್ಯರ ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಒದಗಿಸುವ ಉದ್ದೇಶದಿಂದ ‘ಆಶಯ ಬುಲೆಟಿನ್’ ಅನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಸದಸ್ಯರು, ಸಿಬ್ಬಂದಿ ಹಾಗೂ ನಿರ್ದೇಶಕರ ಸಾಧನೆಗಳ ಜೊತೆಗೆ ಕಥೆ, ಕವನ, ಲೇಖನ ಸೇರಿದಂತೆ ಸದಸ್ಯರ ಸಾಹಿತ್ಯಿಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಈ ಬುಲೆಟಿನ್ ನಲ್ಲಿ ಸದಸ್ಯರ ಸಂಸ್ಥೆಗಳ ಜಾಹೀರಾತಿಗೂ ಅವಕಾಶವಿದ್ದು ಸದಸ್ಯರ ವ್ಯವಹಾರಿಕ ಪ್ರಗತಿಗೂ ವೇದಿಕೆಯಾಗಲಿದೆ. ಸಂಘದ ವಿವಿಧ ಯೋಜನೆಗಳು ಮತ್ತು ಚಟುವಟಿಕೆಗಳ ಮಾಹಿತಿಯನ್ನು ಸದಸ್ಯರ ಮನೆಮನೆಗೆ ತಲುಪಿಸುವ ಮಾಧ್ಯಮವಾಗಲಿದೆ.

ಸದಸ್ಯರ ಆರೋಗ್ಯದ ದೃಷ್ಟಿಯಿಂದ 9 ಆಮ್ಲಜನಕ ಸಾಂದ್ರಕಗಳನ್ನು ಸಂಘಕ್ಕೆ ಲಭಿಸಿದ್ದು, ಅಗತ್ಯ ಸಂದರ್ಭದಲ್ಲಿ ಸದಸ್ಯರಿಗೆ ಕೇವಲ ₹100ರ ಸೇವಾ ಶುಲ್ಕದಲ್ಲಿ ಒದಗಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಇ-ಸ್ಟಾಂಪಿಂಗ್ ಸೇವೆಯ ಮಹತ್ವವನ್ನೂ ಅವರು ವಿವರಿಸಿದರು. ಕಳೆದ ವರ್ಷ ಸುಮಾರು 4,500 ಮಂದಿ ಇ-ಸ್ಟಾಂಪಿಂಗ್ ಸೇವೆಯ ಮೂಲಕ ಸಂಘದ ಕಚೇರಿಗೆ ಭೇಟಿ ನೀಡಿದ್ದಾರೆ ಎಂದರು.

ಸದಸ್ಯರಿಗೆ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಠೇವಣಿ ಹಾಗೂ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಠೇವಣಿಗಳಿಗೆ 10.15ರಿಂದ 10.25 ಶೇಕಡಾವರೆಗೆ ಬಡ್ಡಿ ಹಾಗೂ 12 ಶೇಕಡಾದಿಂದ ಚಿನ್ನದ ಸಾಲ ನೀಡಲಾಗುತ್ತಿದೆ ಎಂದು ತಿಳಿಸಲಾಯಿತು. ಆಶಯವು ಕಳೆದ ಸಾಲಿನಲ್ಲಿ 300 ಕೋಟಿ ರೂ ದಾಖಲೆಯ ವ್ಯವಹಾರವನ್ನು ಸಾಧಿಸಿದ್ದು, ಇದು ಕೇವಲ ಎರಡೇ ಶಾಖೆಗಳನ್ನು ಹೊಂದಿರುವ ಸಹಕಾರಿಯ ಸಾಧನೆ ಆಗಿರುತ್ತದೆ. ಸಂಸ್ಥೆಯ ಆಂತರಿಕ ಶಿಸ್ತು ಮತ್ತು ಪಾರದರ್ಶಕತೆಗೆ ಒತ್ತು ನೀಡಲು ಆಂತರಿಕ ಲೆಕ್ಕಪರಿಶೋಧಕರ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.

ಸಿಬ್ಬಂದಿ, ನಿರ್ದೇಶಕರು, ಸದಸ್ಯರು ಹಾಗೂ ಹಿತೈಷಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಅಧ್ಯಕ್ಷ ಸುವ್ರತ್ ಕುಮಾರ್, ಭವಿಷ್ಯದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಆಶಯ ಸಹಕಾರಿ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

ಆಶಯ ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ರಾಬರ್ಟ್ ರೊನಾಲ್ಡ್ ಫೆರ್ನಾಂಡಿಸ್ ಸ್ವಾಗತಿಸಿ ಆಶಯದ ಬೆಳವಣಿಗೆಯಲ್ಲಿ ಸರ್ವ ಸದಸ್ಯರ ಸಹಕಾರವನ್ನು ಸ್ಮರಿಸಿದರು. ಹಿರಿಯ ನಿರ್ದೇಶಕರಾದ ಶ್ರೀ ಮೋಹನ್ ಪಡಿವಾಳ್ ಮಾತನಾಡಿ ಆಶಯ ಸಹಕಾರಿಯು ಅಧ್ಯಕ್ಷರಾದ ಶ್ರೀ ಎಂ.ಕೆ ಸುವ್ರತ್ ಕುಮಾರ್ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು. ಆಶಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಶೇಖರ್ ರಾವ್ ಸಾಧನೆಯ ವರದಿ ಮಂಡಿಸಿದರು. ಲೆಕ್ಕಪರಿಶೋಧಕ ಶ್ರೀ ಉಮೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀ ನಿರಂಜನ್ ಜೈನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.