ರಾಜ್ಯದ ಸರ್ಕಾರಿ ಶಾಲೆಗಳಿಗೆ ಹೊಸ ಸಮಯ ಜಾರಿ; ಶನಿವಾರ ಮಾತ್ರ ವೇಳಾಪಟ್ಟಿ ಬದಲಾವಣೆ

0
62

ಮಂಗಳೂರು : ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಶಾಲಾ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಏಕರೂಪದ ಸಮಯವನ್ನು ನಿಗದಿಪಡಿಸಿದ್ದು, ಇಂದಿನಿಂದಲೇ (ಜೂನ್ 27) ಈ ಆದೇಶ ಜಾರಿಗೆ ಬಂದಿದೆ.

ಹೊಸ ವೇಳಾಪಟ್ಟಿಯಂತೆ, ಪ್ರತಿ ಶನಿವಾರ ಬೆಳಗ್ಗೆ 8.30ಕ್ಕೆ ಶಾಲೆ ಆರಂಭವಾಗಿ ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ. ಈವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಳೀಯವಾಗಿ ಬೇರೆ ಬೇರೆ ಸಮಯವನ್ನು ಅನುಸರಿಸಲಾಗುತ್ತಿತ್ತು. ಕೆಲವೆಡೆ ಬೆಳಗ್ಗೆ 7.30ರಿಂದ 11.30ರವರೆಗೆ, ಮತ್ತಿತರ ಕಡೆ 8ರಿಂದ 12 ಗಂಟೆಯವರೆಗೆ ಶಾಲೆ ನಡೆಯುತ್ತಿತ್ತು. ಈಗ ಈ ವ್ಯತ್ಯಾಸಕ್ಕೆ ತೆರೆ ಎಳೆದು ರಾಜ್ಯಾದ್ಯಂತ ಒಂದೇ ಸಮಯವನ್ನು ಅನುಸರಿಸಲು ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ ಸರ್ಕಾರಿ ನೌಕರರಿಗೆ ಎಐ ಆಧಾರಿತ ‘ಕರ್ತವ್ಯ’ ಮೊಬೈಲ್ ಅಪ್ಲಿಕೇಷನ್ ಮೂಲಕ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಹತ್ವ ಪಡೆದಿದೆ. ಹಿಂದೆ ಶಿಕ್ಷಕರ ಹಾಜರಾತಿಯನ್ನು ಹಾಜರಾತಿ ಪುಸ್ತಕದಲ್ಲಿ ದಾಖಲಿಸಲಾಗುತ್ತಿತ್ತು. ಆದರೆ ಈಗ ಅಪ್ಲಿಕೇಷನ್ ಮೂಲಕ ಸಮಯಕ್ಕೆ ಸರಿಯಾಗಿ ಹಾಜರಾತಿ ದಾಖಲಿಸಬೇಕಿರುವುದರಿಂದ, ಒಂದು ನಿಮಿಷ ತಡವಾದರೂ ಗೈರುಹಾಜರಾತಿಯಾಗಿ ದಾಖಲಾಗುವ ಸಾಧ್ಯತೆ ಇದೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ ಸೇವೆಯನ್ನು ಅವಲಂಬಿಸಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಶನಿವಾರ ಸಮಯಕ್ಕೆ ಶಾಲೆ ತಲುಪಲು ತೊಂದರೆಯಾಗುತ್ತಿರುವ ಬಗ್ಗೆ ಶಿಕ್ಷಕರ ಸಂಘಟನೆಗಳು ಸರ್ಕಾರದ ಗಮನಕ್ಕೆ ತಂದಿದ್ದವು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶನಿವಾರದ ವೇಳಾಪಟ್ಟಿಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವೇಳಾಪಟ್ಟಿಯನ್ನು ‘ಕರ್ತವ್ಯ’ ಅಪ್ಲಿಕೇಷನ್‌ನಲ್ಲೂ ಅಪ್‌ಡೇಟ್ ಮಾಡಲಾಗಿದ್ದು, ಜೂನ್ 27ರಿಂದ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶನಿವಾರದಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಶಾಲೆ ನಡೆಯಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here