ಅನ್ನವೂ ಇಲ್ಲ, ಆಸರೆಯೂ ಇಲ್ಲ: ಅಸಹಾಯಕ ಸ್ಥಿತಿಯಲ್ಲಿ ವ್ಯಕ್ತಿ ಆಸ್ಪತ್ರೆಗೆ ದಾಖಲು

0
11

ಉಡುಪಿ : ನಗರದ ಮಿಷನ್ ಆಸ್ಪತ್ರೆಯ ಸಮೀಪದ ಸೆಲೂನ್ ಒಂದರ ಬಳಿ ಕಳೆದ ಮೂರು ದಿನಗಳಿಂದ ಅನ್ನಾಹಾರವಿಲ್ಲದೆ, ಸೊಂಟದ ಸ್ವಾಧೀನ ಕಳೆದುಕೊಂಡು ನಡೆಯಲೂ ಸಾಧ್ಯವಾಗದೆ ವ್ಯಕ್ತಿಯೊಬ್ಬರು ಅಸಹಾಯಕ ಸ್ಥಿತಿಯಲ್ಲಿ ನರಳುತ್ತಿದ್ದ ಘಟನೆ ಮಾನವೀಯ ಕಳವಳಕ್ಕೆ ಕಾರಣವಾಗಿದೆ.

ವ್ಯಕ್ತಿಯ ದಯನೀಯ ಸ್ಥಿತಿಯನ್ನು ಗಮನಿಸಿದ ಸ್ಥಳೀಯರಾದ ಸಾಬು ಬೇಪಾರಿ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಒಳಕಾಡು ಅವರು, ವ್ಯಕ್ತಿಯ ದುಃಸ್ಥಿತಿಯನ್ನು ಕಂಡು ಮರುಗಿ, ಯಾವುದೇ ವಿಳಂಬ ಮಾಡದೆ ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲು ನೆರವಾಗಿದ್ದಾರೆ.

ಮೂರು ದಿನಗಳಿಂದ ಹಸಿವು, ನೋವು ಹಾಗೂ ಅಸಹಾಯಕತೆಯ ನಡುವೆ ಯಾರ ನೆರವೂ ಇಲ್ಲದೆ ದಿನದೂಡುತ್ತಿದ್ದ ವ್ಯಕ್ತಿಗೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತಾಗಿದೆ. ವ್ಯಕ್ತಿಯ ಹೆಸರು ಮಹಮ್ಮದ್ ಅಲಿ ಎಂದು ತಿಳಿದುಬಂದಿದೆ.

ಮಹಮ್ಮದ್ ಅಲಿ ಅವರ ವಾರಸುದಾರರು ಅಥವಾ ಪರಿಚಯಸ್ಥರು ತಕ್ಷಣ ಅಜ್ಜರಕಾಡು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.