ನ.22-28: ಯಕ್ಷಾಂಗಣದಿಂದ ತಾಳಮದ್ದಳೆ ಸಪ್ತಾಹ: ಸಂಘಟನಾ ಪರ್ವ

0
9

ವಿವಿಧ ತಂಡಗಳಿಂದ ಅಪರೂಪದ ಪ್ರಸಂಗಗಳ ಪ್ರಸ್ತುತಿ

ಮಂಗಳೂರು : ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾಲಯ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಈ ಬಾರಿ ನಡೆಸಲಿರುವ 14ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – ಚತುರ್ದಶ ಸರಣಿ’ಯು ಇದೇ 2026 ನವೆಂಬರ್ ತಿಂಗಳ 22 ರಿಂದ 28 ರವರೆಗೆ ನಿಗದಿಯಾಗಿದೆ. ನಿರಂತರ ಏಳು ದಿನಗಳ ಕಾರ್ಯಕ್ರಮವನ್ನು ನಗರದ ವಿಶ್ವವಿದ್ಯಾಲಯ ಕಾಲೇಜು ರವೀಂದ್ರ ಕಲಾ ಭವನದಲ್ಲಿ ಏರ್ಪಡಿಸಲಾಗಿದೆ. ‘ಸಂಘಟನಾ ಪರ್ವ’ ಎಂಬ ಹೆಸರಿನ ಸಪ್ತಾಹದಲ್ಲಿ ಜಿಲ್ಲೆಯ ವಿವಿಧ ತಂಡಗಳಿಂದ ತಾಳಮದ್ದಳೆ ಕ್ಷೇತ್ರಕ್ಕೆ ಅಪರೂಪವೆನಿಸಿದ ಕೆಲವು ಯಕ್ಷಗಾನ ಪ್ರಸಂಗಗಳು ಪ್ರಸ್ತುತಿಗೊಳ್ಳಲಿವೆ ‘ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಇತ್ತೀಚೆಗೆ ಕದ್ರಿ ಕಂಬಳದ ಗೃಹಕಚೇರಿಯಲ್ಲಿ ಜರಗಿದ ಯಕ್ಷಾಂಗಣದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ನವಂಬರ 22 ರಂದು ಆದಿತ್ಯವಾರ ಅಪರಾಹ್ನ ಗಂಟೆ 2ರಿಂದ ತೋರಣ ನಾಂದಿಯಾಗಿ ‘ ಬಂಗಾರ್ದ ಉರೆ’ ಎಂಬ ತುಳು ತಾಳಮದ್ದಳೆಯೊಂದಿಗೆ ಆರಂಭವಾಗುವ ಸಪ್ತಾಹದ ಉದ್ಘಾಟನಾ ಸಮಾರಂಭ ಅದೇ ದಿನ ಸಂಜೆ ಗಂ.4 ಕ್ಕೆ ಜರಗುವುದು. ಬಳಿಕ ಆ ದಿನ ಮೊದಲ್ಗೊಂಡು ಪ್ರತಿದಿನ ಸಾಯಂಕಾಲ ಗಂ.4.00 ರಿಂದ ಈಗಾಗಲೇ ತಾಳಮದ್ದಳೆ ಕ್ಷೇತ್ರದಲ್ಲಿ ಖ್ಯಾತರಾದ ಹಿರಿಯ ಯಕ್ಷಗಾನ ಕಲಾವಿದರನ್ನು ಬಳಸಿಕೊಂಡು ವಿವಿಧ ತಂಡಗಳು ವಿನೂತನ ಪ್ರಸಂಗಗಳನ್ನು ಪ್ರಸ್ತುತಪಡಿಸಲಿವೆ’ ಎಂದವರು ತಿಳಿಸಿದರು.

ಭಾಗವಹಿಸುವ ಕಲಾ ಸಂಘಗಳು

‘ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಮೂಡಿ ಬರುವ ಚತುರ್ದಶ ಸರಣಿಯಲ್ಲಿ ಒಟ್ಟು ಏಳು ಯಕ್ಷಗಾನ ಸಂಘಟನೆಗಳು ಭಾಗವಹಿಸುತ್ತವೆ’ ಎಂದು ಸಮಿತಿ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ತಿಳಿಸಿದರು.

ನ.22 ರಂದು ಆದಿತ್ಯವಾರ ಮಧ್ಯಾಹ್ನ ಗಂ.2.00 ರಿಂದ ತೋರಣ ನಾಂದಿ ದೀಪೋಜ್ವಲನೆಯೊಂದಿಗೆ ಜರಗುವ ‘ಬಂಗಾರ್ದ ಉರೆ’ ತುಳು ತಾಳಮದ್ದಳೆಯ ಹಿಮ್ಮೇಳದಲ್ಲಿ ತೋನ್ಸೆ ಪುಷ್ಕಳ ಕುಮಾರ್,ರಾಜೇಶ್ ಕುಡುಪಾಡಿ, ವಿಘ್ನೇಶ್ ಶೆಟ್ಟಿ ಭಾಗವಹಿಸುವರು. ಭಾಸ್ಕರ ರೈ ಕುಕ್ಕುವಳ್ಳಿ, ಅಶೋಕ ಶೆಟ್ಟಿ ಸರಪಾಡಿ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರವೀಣ್ ರೈ ಎಲಿಯಾರ್ ಅರ್ಥಧಾರಿಗಳಾಗಿರುವರು.

ಅದೇ ದಿನ ಉದ್ಘಾಟನಾ ಪರ್ವದ ಬಳಿಕ ಸಾಯಂಕಾಲ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನ (ರಿ.) ಉಪ್ಪಿನಂಗಡಿ ಇವರಿಂದ ‘ಚಂದ್ರ ವಂಶೋದಯ’ ಪ್ರಸಂಗದ ಪ್ರಸ್ತುತಿಯಾಗಲಿದೆ. ಹಿಮ್ಮೇಳದಲ್ಲಿ ಮಹೇಶ ಕನ್ಯಾಡಿ, ಪದ್ಮನಾಭ ಕುಲಾಲ್ ಉಪ್ಪಿನಂಗಡಿ ಶ್ರೀಪತಿ ಭಟ್ ಉಪ್ಪಿನಂಗಡಿ , ಮುರಳೀಧರ ಆಚಾರ್ಯ ನೇರೆಂಕಿ ಮತ್ತು
ಅರ್ಥಧಾರಿಗಳಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿವಾಕರ ಆಚಾರ್ಯ ಗೇರುಕಟ್ಟೆ, ಈಶ್ವರ ಪ್ರಸಾದ್ ನಿಡ್ಲೆ, ದಿವಾಕರ ಆಚಾರ್ಯ ಹಳೆನೇರೆಂಕಿ, ಶ್ರೀಧರ ಎಸ್. ಪಿ. ಕೃಷ್ಣಾಪುರ, ಗೀತಾ ಕೆ ಎ, ಪುಷ್ಪಾ ತಿಲಕ್, ಶ್ರುತಿ ಬಲ್ನಾಡು ಭಾಗವಹಿಸುತ್ತಾರೆ.

ನ.23 ರಂದು ಹವ್ಯಾಸಿ ಬಳಗ ಕದ್ರಿ ( ರಿ) ಮಂಗಳೂರು ಇವರು ‘ರಾಜಾ ಸೌದಾಸ’ ಪ್ರಸಂಗವನ್ನು ನಡೆಸಿಕೊಡುವರು. ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ಪೊಳಲಿ, ಸುದಾಸ್ ಆಚಾರ್ಯ ಕಾವೂರು, ರಾಜೇಶ್ ಕುಡುಪಾಡಿ ಹಾಗೂ ಅರ್ಥಧಾರಿಗಳಾಗಿ ಜಬ್ಬಾರ್ ಸಮೋ ಸಂಪಾಜೆ, ರವಿ ಅಲೆವೂರಾಯ ವರ್ಕಾಡಿ, ಶಿವಾನಂದ ಪೆರ್ಲಗುರಿ, ಡಾ. ದಿನಕರ ಎಸ್ . ಪಚ್ಚನಾಡಿ, ವಿದ್ಯಾಧರ ಶೆಟ್ಟಿ, ಸುನಿಲ್ ಪಲ್ಲಮಜಲು ಪಾಲ್ಗೊಳ್ಳುವರು.

ದಿನಾಂಕ 24ರಂದು ಶ್ರೀ ವಾಣಿವಿಲಾಸ ಯಕ್ಷಗಾನ ಬಳಗ ಶಿರಂಕಲ್ಲು, ಕಟೀಲು ಇವರ ಸಂಘಟನೆಯಲ್ಲಿ ನಡೆಯುವ ‘ಭಾರ್ಗವ ರಾಮ’ ಪ್ರಸಂಗದಲ್ಲಿ ರವಿಕೃಷ್ಣ ದಂಬೆ, ಹರಿನಾರಾಯಣ ಬೈಪಡಿತ್ತಾಯ, ಅವಿನಾಶ್ ಬೈಪಡಿತ್ತಾಯ ಅವರ ಹಿಮ್ಮೇಳ ಹಾಗೂ ರಾಧಾಕೃಷ್ಣ ಕಲ್ಚಾರ್, ವಿನಯಾಚಾರ್ ಹೊಸಬೆಟ್ಟು, ಪಶುಪತಿ ಶಾಸ್ತ್ರಿ ಶಿರಂಕಲ್ಲು, ಉಮೇಶ್ ನೀಲಾವರ ಅರ್ಥಧಾರಿಗಳಾಗಿರುವರು.

ನವೆಂಬರ್ 25 ಕ್ಕೆ ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ರಿ.) ಇವರ ಸಂಯೋಜನೆಯ ‘ವಿಷ್ಣುಮಾಯೆ’ ತಾಳಮದ್ದಳೆಯಲ್ಲಿ ರಾಜಾರಾಮ ಹೊಳ್ಳ ಕೈರಂಗಳ, ದೇವೀಪ್ರಸಾದ ಆಳ್ವ ತಲಪಾಡಿ, ಸ್ಕಂದ ಕೊನ್ನಾರ್, ಶೈವಿನ್ ಶೆಟ್ಟಿಗಾರ್, ಹರಿಶ್ಚಂದ್ರ ನಾಯ್ಗ ಮಾಡೂರು ಅವರ ಹಿಮ್ಮೇಳಕ್ಕೆ ಅರ್ಥಧಾರಿಗಳಾಗಿ ಸದಾಶಿವ ಆಳ್ವ ತಲಪಾಡಿ, ಗಣೇಶ ಕುಂಜತ್ತೂರು, ಗಣೇಶ ಕಾವ ಅಂಡಾಲಬೀಡು, ಬಾಲಕೃಷ್ಣ ಶೆಟ್ಟಿ ಎಕ್ಕೂರು, ನವೀನ್ ಇರಾ, ದೀವಿತ್ ಎಸ್. ಕೆ. ಪೆರಾಡಿ ಪಾಲ್ಗೊಳ್ಳುವರು.

ತಾರೀಕು 26 ರಂದು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಕೂಡ್ಲು ಕಾಸರಗೋಡು ಪ್ರಸ್ತುತಿಯಲ್ಲಿ ‘ಶಲ್ಯ ಸಾರಥ್ಯ’ ಪ್ರಸಂಗವಿದೆ. ಹಿಮ್ಮೇಳದಲ್ಲಿ ವಾಸುದೇವ ಕಲ್ಲೂರಾಯ ಮಧೂರು, ಮುರಳೀಮಾಧವ ಮಧೂರು, ಗೋಪಾಲಕೃಷ್ಣ ನಾವಡ ಹಾಗೂ ಅರ್ಥಧಾರಿಗಳಾಗಿ ಮಹಾಬಲ ಶೆಟ್ಟಿ ಕೂಡ್ಲು, ಗೋಪಾಲ ಮಡಿನ್ನಾಯ ಕೂಡ್ಲು, ಸತ್ಯನಾರಾಯಣ ತಂತ್ರಿ, ಮಹಾಬಲ ನಾಯ್ಕ್ ಕೂಡ್ಲು, ಸರಸ್ವತಿ ಅಡಿಗ ಭಾಗವಹಿಸುತ್ತಾರೆ.

ದಿನಾಂಕ 27 ರಂದು ಶ್ರೀ ಸುಬ್ರಹ್ಮಣ್ಯ ಯಕ್ಷ ಬಳಗ ಇವರು ಹರೀಶ ಶೆಟ್ಟಿ ಸೂಡ ವಿರಚಿತ ‘ದಾನಕೋಟಿ ದಾಮಾಜಿ’ ಎಂಬ ತುಳು ಪ್ರಸಂಗವನ್ನು ನಡೆಸಲಿದ್ದು ಹಿಮ್ಮೇಳದಲ್ಲಿ ಹರೀಶ ಶೆಟ್ಟಿ ಸೂಡ, ಆನಂದ ಪಡ್ರೆ, ಸ್ಕಂದ ಕೊನ್ನಾರ್ ,ಅಕ್ಷಯ್ ಶೆಟ್ಟಿ ಕಲ್ಯಾ ಭಾಗವಹಿಸುವರು. ಡಾ| ಎಂ.ಪ್ರಭಾಕರ ಜೋಷಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಸದಾಶಿವ ಆಳ್ವ ತಲಪಾಡಿ, ಡಾ|ಮಹೇಶ್ ಸಾಣೂರು, ಸುರೇಶ್ ಕೊಲಕಾಡಿ ಅರ್ಥಧಾರಿಗಳಾಗಿರುವರು.

ನವಂಬರ 28 ಶನಿವಾರ ಸಂಜೆ ಗಂ.4.00 ಕ್ಕೆ ಸಪ್ತಾಹ ಸಮಾರೋಪದ ಅಂಗವಾಗಿ ಕರ್ನಾಟಕ ಯಕ್ಷಭಾರತಿ(ರಿ.) ಪುತ್ತೂರು ಇವರು ‘ರಾಜಾ ಯಯಾತಿ’ ಪ್ರಸಂಗವನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸುವರು. ಪ್ರಶಾಂತ ರೈ ಪಂಜ, ಪುತ್ತೂರು,ರೋಹಿತ್ ಉಚ್ಚಿಲ್, ಜಿತೇಶ್ ಕೋಳ್ಯೂರು, ಹರಿಶ್ಚಂದ್ರ ನಾಯಗ ಮಾಡೂರು ಇವರು ಹಿಮ್ಮೇಳದಲ್ಲಿದ್ದು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬಳೆ, ಎಂ.ಕೆ.ರಮೇಶಾಚಾರ್ಯ, ರಮೇಶ ಸಾಲ್ವಣ್ಕರ್, ಉಮೇಶ ಆಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿರುವರು ಎಂದು ರವೀಂದ್ರ ರೈ ವಿವರಿಸಿದರು.

ಹಿರಿಯರ ಸಂಸ್ಮರಣೆ,ಸಮ್ಮಾನಮತ್ತು ಪ್ರಶಸ್ತಿ ಪ್ರದಾನ

ಯಕ್ಷಾಂಗಣದ ತಾಳಮದ್ದಳೆ ಸಪ್ತಾಹದಲ್ಲಿ ಪ್ರತಿವರ್ಷದಂತೆ ಅಗಲಿದ ಹಿರಿಯ ಕಲಾವಿದರ ಸಂಸ್ಮರಣೆ, ಸಾಧಕರ ಸನ್ಮಾನ ಹಾಗೂ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಮತ್ತು ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನಗಳೂ ಜರಗಲಿವೆ ಎಂದು ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ತಿಳಿಸಿದರು.
ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಮಹಿಳಾ ಸಂಚಾಲಕಿ ನಿವೇದಿತಾ ಎನ್.ಶೆಟ್ಟಿ ಬೆಳ್ಳಿಪ್ಪಾಡಿ, ಕಾರ್ಯದರ್ಶಿಗಳಾದ ಕೆ.ಲಕ್ಷೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್, ಕಾರ್ಯಕಾರಿಣಿ ಸದಸ್ಯರುಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಸಿದ್ಧಾರ್ಥ ಆಜ್ರಿ ಸಭೆಯಲ್ಲಿ ಉಪಸ್ಥಿತರಿದ್ದರು.