18ನೇ ವಯಸ್ಸಿನಲ್ಲೇ ಕಾದಂಬರಿ ರಚನೆ: ಧನುಷ್ ಪೂಜಾರಿ ಅವರ ಮೊದಲ ಕೃತಿ ‘ದಿ ಚಾಯ್ಸಸ್ ವಿ ಮೇಕ್’ ಬಿಡುಗಡೆ

0
8

ಸ್ವಂತ ಕಲ್ಪನೆಯಿಂದ ಸಂಪೂರ್ಣ ಕಾಲ್ಪನಿಕ ಕಥೆ ರಚಿಸಿ ಪುಸ್ತಕ ಪ್ರಕಟಿಸಿದ ಯುವ ಬರಹಗಾರ

ಉಡುಪಿ: ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವ ಬರಹಗಾರ ಧನುಷ್ ಪೂಜಾರಿ ಅವರು ತಮ್ಮ ಮೊದಲ ಪುಸ್ತಕ ‘The Choices We Make’ ಅನ್ನು ಪ್ರಕಟಿಸುವ ಮೂಲಕ ಬರವಣಿಗೆಯ ಕ್ಷೇತ್ರದಲ್ಲಿ ಹೆಜ್ಜೆಯಿಟ್ಟಿದ್ದಾರೆ.

2008ರ ಅಕ್ಟೋಬರ್ 23ರಂದು ಜನಿಸಿದ ಧನುಷ್ ಪೂಜಾರಿ ಅವರು ಪ್ರಸ್ತುತ 18ನೇ ವಯಸ್ಸಿನವರಾಗಿದ್ದು ಜ್ಞಾನ ಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ PCMCs (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್) ವಿಷಯಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಆಸಕ್ತಿ ಬೆಳೆಸಿಕೊಂಡಿರುವ ಅವರು, ತಮ್ಮದೇ ಆದ ಕಲ್ಪನೆ ಹಾಗೂ ಸೃಜನಶೀಲತೆಯ ಮೂಲಕ ಮೊದಲ ಪುಸ್ತಕವನ್ನು ರಚಿಸಿದ್ದಾರೆ.

‘The Choices We Make’ ಸಂಪೂರ್ಣ ಕಾಲ್ಪನಿಕ ಕಥೆಯನ್ನು ಆಧರಿಸಿದ ಕೃತಿಯಾಗಿದೆ. ಈ ಪುಸ್ತಕವನ್ನು ತಾವೇ ಸ್ವತಂತ್ರವಾಗಿ ಬರೆದಿದ್ದು, ಕಥೆಯ ರಚನೆಗೆ ಸಾಮಾಜಿಕ ಮಾಧ್ಯಮಗಳ ಸಹಾಯವನ್ನು ಬಳಸದೆ ತಮ್ಮದೇ ಆದ ಆಲೋಚನೆ ಮತ್ತು ಕಲ್ಪನೆಗಳಿಗೆ ಆದ್ಯತೆ ನೀಡಿದ್ದಾರೆ ಎಂದು ಧನುಷ್ ತಿಳಿಸಿದ್ದಾರೆ.

ಯುವ ವಯಸ್ಸಿನಲ್ಲೇ ಪುಸ್ತಕವೊಂದನ್ನು ರಚಿಸಿ ಪ್ರಕಟಿಸಿರುವುದು ಅವರ ಸಾಹಿತ್ಯಾಸಕ್ತಿ ಮತ್ತು ಸೃಜನಶೀಲ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ವಿದ್ಯಾಭ್ಯಾಸದ ಜೊತೆಗೆ ತಮ್ಮ ಕಲ್ಪನೆಗಳಿಗೆ ಅಕ್ಷರರೂಪ ನೀಡಿರುವ ಧನುಷ್ ಅವರ ಈ ಪ್ರಯತ್ನವು ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಇತರ ಯುವಕರಿಗೂ ಪ್ರೇರಣೆಯಾಗಬಲ್ಲದು.

‘The Choices We Make’ ಕೃತಿಯ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸುವ ಆಶಯ ಹೊಂದಿರುವ ಧನುಷ್ ಪೂಜಾರಿ ಅವರ ಮುಂದಿನ ಬರವಣಿಗೆಯ ಪಯಣ ಯಶಸ್ವಿಯಾಗಲಿ ಎಂಬುದು ಹಾರೈಕೆ.