ಯುಪಿಐ ಆಧಾರಿತ ಡಿಜಿಟಲ್ ಪಾವತಿಗೆ ಎನ್‌ಪಿಸಿಐ–ಕೆನರಾ ಬ್ಯಾಂಕ್ ಸಹಯೋಗ

0
30

ಮಂಗಳೂರು: ಯುಪಿಐ ಆಧಾರಿತ ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಗಮ ಹಾಗೂ ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಎನ್‌ಪಿಸಿಐ ಭೀಮ್ ಸರ್ವೀಸ್‌ಸ್ ಲಿಮಿಟೆಡ್ (ಎನ್‌ಬಿಎಸ್‌ಎಲ್) ಮತ್ತು ಕೆನರಾ ಬ್ಯಾಂಕ್ ಸಹಯೋಗಕ್ಕೆ ಬಂದಿವೆ. ಈ ಸಹಭಾಗಿತ್ವದಡಿ, ಕೆನರಾ ಬ್ಯಾಂಕ್‌ನ ಪಾವತಿ ಅಪ್ಲಿಕೇಶನ್ ಕೆನರಾ Ai1Pay ನಲ್ಲಿ ಯುಪಿಐ ಆಧಾರಿತ ಡಿಜಿಟಲ್ ಪಾವತಿ ಸೇವೆಗಳನ್ನು ಸಕ್ರಿಯಗೊಳಿಸಲಾಗಿದೆ.

ಈ ಕ್ರಮದಿಂದ ಕೆನರಾ ಬ್ಯಾಂಕ್ ಗ್ರಾಹಕರಿಗೆ ಮಾತ್ರವಲ್ಲದೆ ಗ್ರಾಹಕೇತರರಿಗೂ ಸುರಕ್ಷಿತ ಹಾಗೂ ವಿಸ್ತೃತ ಡಿಜಿಟಲ್ ಪಾವತಿ ಸೌಲಭ್ಯಗಳು ಲಭ್ಯವಾಗಲಿವೆ. ಭೀಮ್ ಬ್ಯಾಂಕ್ ಪ್ಲಗಿನ್ ಸಾಮರ್ಥ್ಯಗಳನ್ನು ಬಳಸಿಕೊಂಡು, ಕೆನರಾ ಬ್ಯಾಂಕ್ ಅಪ್ಲಿಕೇಶನ್‌ನಲ್ಲಿ ಯುಪಿಐ ಸೇವೆಗಳಿಗೆ ಬೆಂಬಲ ನೀಡಲಾಗುತ್ತಿದೆ.

ಈ ಕುರಿತು ಪ್ರಕಟಣೆ ನೀಡಿರುವ ಎನ್‌ಪಿಸಿಐ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಾಹಕಿ ಲಲಿತಾ ನಾಟರಾಜ್, ಈ ಸಹಭಾಗಿತ್ವವು ಅನುಸರಣೆ, ವಿಶ್ವಾಸಾರ್ಹತೆ ಮತ್ತು ವ್ಯವಸ್ಥೆಯ ವಿಸ್ತಾರವನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಹೊಸ ಯುಪಿಐ ವೈಶಿಷ್ಟ್ಯಗಳನ್ನು ವೇಗವಾಗಿ ಅಳವಡಿಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಈ ಸಹಕಾರದ ಮೂಲಕ, ಕೆನರಾ ಬ್ಯಾಂಕ್ ಭೀಮ್ ಪೇಮೆಂಟ್ಸ್ ಅಪ್ಲಿಕೇಶನ್‌ನಲ್ಲಿ ಪರಿಚಯಗೊಳ್ಳುತ್ತಿರುವ ನವೀನ ಯುಪಿಐ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತಾ ಅಪ್‌ಗ್ರೇಡ್‌ಗಳಿಗೆ ಪ್ರವೇಶ ಪಡೆಯಲಿದೆ. ಈ ಏಕೀಕರಣವು ಉತ್ತಮ ಸುರಕ್ಷತೆ, ಕಾರ್ಯಾಚರಣಾ ಸ್ಥೈರ್ಯ ಹಾಗೂ ವಿಸ್ತಾರವನ್ನು ಬೆಂಬಲಿಸುವುದರೊಂದಿಗೆ, ಸ್ವತಂತ್ರ ಯುಪಿಐ ಇಂಟರ್ಫೇಸ್ ಅಭಿವೃದ್ಧಿ, ನಿರ್ವಹಣೆ ಹಾಗೂ ನಿರಂತರ ಅಪ್‌ಗ್ರೇಡ್‌ಗೆ ಬೇಕಾದ ವೆಚ್ಚ ಮತ್ತು ಸಂಪನ್ಮೂಲಗಳನ್ನು ಕಡಿಮೆ ಮಾಡಲಿದೆ.

ಇದಲ್ಲದೆ, ನಿಯಂತ್ರಣಾತ್ಮಕ ಹಾಗೂ ಡಿಜಿಟಲ್ ಪಾವತಿ ಎಕೋಸಿಸ್ಟಮ್ ಅಗತ್ಯಗಳಿಗೆ ನಿರಂತರ ಅನುಸರಣೆ ಖಚಿತಪಡಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.

ಈ ರೀತಿಯ ದೃಷ್ಠಿಕೋನವನ್ನು ಅಳವಡಿಸಿಕೊಂಡ ಮೊದಲ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿದ್ದು, ಇನ್ನು ಮುಂದೆ ಇನ್ನಷ್ಟು ಬ್ಯಾಂಕ್‌ಗಳೊಂದಿಗೆ ಯುಪಿಐ ಸಾಮರ್ಥ್ಯವನ್ನು ಬಲಪಡಿಸಲು ಹಾಗೂ ವಿಸ್ತರಿಸಲು ಎನ್‌ಬಿಎಸ್‌ಎಲ್ ಚರ್ಚೆ ನಡೆಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here