ತುಳು ಭಾಷೆಗೆ ಅಧಿಕೃತ ಮಾನ್ಯತೆ : ಇದು ತುಳುವರ ದೀರ್ಘ ಹೋರಾಟಕ್ಕೆ ಸಂದ ಗೌರವ – ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು

0
9

ಮಂಗಳೂರು : ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡ ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತುಳುನಾಡಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ತಿಳಿಸಿದ್ದಾರೆ.

ತುಳು ಕೇವಲ ಭಾಷೆಯಲ್ಲ; ಅದು ತೌಳವ ನಾಡಿನ ಅಸ್ಮಿತೆ, ಆತ್ಮಗೌರವ, ಸಂಸ್ಕೃತಿ ಮತ್ತು ಸಾವಿರಾರು ವರ್ಷಗಳ ಪರಂಪರೆಯ ಪ್ರತೀಕವಾಗಿದೆ. ದೈವಾರಾಧನೆ, ನಾಗಾರಾಧನೆ, ಯಕ್ಷಗಾನ, ತಾಳಮದ್ದಳೆ ಹಾಗೂ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ತುಳುವಿಗೆ ಅಧಿಕೃತ ಮಾನ್ಯತೆ ದೊರೆತಿರುವುದು ತುಳುವರ ಹಲವು ವರ್ಷಗಳ ಹೋರಾಟಕ್ಕೆ ಸಂದ ಗೌರವವಾಗಿದೆ ಎಂದು ಅವರು ಹೇಳಿದ್ದಾರೆ.

“ಭರವಸೆ ಬೇಡ, ನಿರ್ಧಾರ ಬೇಕು” ಎಂಬ ಆಶಯದೊಂದಿಗೆ ನಡೆದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿರುವುದು ಸಂತಸದ ಸಂಗತಿ. ಇದೀಗ ಅಧಿಕೃತ ಮಾನ್ಯತೆಯ ಪರಿಣಾಮಕಾರಿ ಅನುಷ್ಠಾನ, ತುಳು ಭಾಷಾ ಅಭಿವೃದ್ಧಿ ನಿಗಮ ಹಾಗೂ ತುಳು ಭವನ ಸ್ಥಾಪನೆ, ಶಿಕ್ಷಣ ಕ್ಷೇತ್ರದಲ್ಲಿ ತುಳುವಿಗೆ ಹೆಚ್ಚಿನ ಅವಕಾಶ ಮತ್ತು ಸಂವಿಧಾನದ ಎಂಟನೇ ಅನುಸೂಚಿಗೆ ತುಳುವನ್ನು ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವ ಕೆಲಸವೂ ವೇಗ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ತುಳು ನಮ್ಮ ಭಾಷೆ ಮಾತ್ರವಲ್ಲ; ನಮ್ಮ ಅಸ್ಮಿತೆ ಮತ್ತು ತೌಳವ ಬದುಕಿನ ಜೀವನಾಡಿ. ಈ ಐತಿಹಾಸಿಕ ನಿರ್ಧಾರಕ್ಕಾಗಿ ಸರ್ಕಾರಕ್ಕೆ ಮತ್ತೊಮ್ಮೆ ಧನ್ಯವಾದಗಳು.” ಎಂದು ಯೋಗೀಶ್ ಶೆಟ್ಟಿ ಜಪ್ಪು ತಿಳಿಸಿದ್ದಾರೆ.