ಮಂಗಳೂರು: ತುಲುವೆರೆ ಕಲ ಸಂಘಟನೆ ವತಿಯಿಂದ ಜೂನ್ 1ರಂದು ಬೆಳಗ್ಗೆ 9.30ರಿಂದ ಉಪ್ಪಳ ಕೊಂಡೆವೂರು ಮಠದ ನಿತ್ಯಾನಂದ ಯೋಗಾಶ್ರಮದಲ್ಲಿ ‘ತುಲುವೆರೆ ಕಲ ವರ್ಸೋಚ್ಚಯ’ ನಡೆಯಲಿದೆ.
ಕೊಂಡೆವೂರು ಯೋಗಾಶಮದ ನಿತ್ಯಾನಂದ ಯೋಗಾನಂದ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾ ಅಭಾಸಾಪ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಂಗಳೂರು ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್, ಸಮಾಜ ಸೇವಕ ಕಾರ್ತಿಕ್ ಶೆಟ್ಟಿ ಮಜಿಬೈಲು ಉಪಸ್ಥಿತರಿರುವರು. ‘ಗೇನದ ಮಂಟಮೆ ವಿಶೇಷ’ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನಾಡು, ನುಡಿ, ಸಂಸ್ಕೃತಿಯ ಉಳಿವಿನಲ್ಲಿ ಭಾಷೆಯ ಪಾತ್ರ’ದ ಕುರಿತು ಶ್ರೀಕಾಂತ್ ಶೆಟ್ಟಿ, ‘ತುಳುನಾಡಿನ ಸಾಹಿತ್ಯ ಪರಂಪರೆ’ ಕುರಿತು ಮಹಿ ಮೂಲ್ಕಿ ಮಾತನಾಡಲಿದ್ದಾರೆ. ಕಲತ ಬೊಳ್ಳಿ ಸನ್ಮಾನವನ್ನು ರಾಜೇಶ್ ಶೆಟ್ಟಿ ದೋಟ ಹಾಗೂ ಶ್ರೀಶಾವಾಸವಿ ತುಳುನಾಡ್ ಅವರಿಗೆ ಪ್ರದಾನಿಸಲಾಗುವುದು.
ಆರು ಕೃತಿ ಬಿಡುಗಡೆ: ಕಾರ್ಯಕ್ರಮದಲ್ಲಿ ಆರು ತುಳು ಕೃತಿಗಳ ಬಿಡುಗಡೆ ನಡೆಯಲಿದೆ. ವಿಶ್ವನಾಥ ಕುಲಾಲ್ ಮಿತ್ತೂರು ಅವರ ‘ರುಪಾಯಿ ನೋಟು’, ಅಶೋಕ ಎನ್.ಕಡೇಶಿವಾಲಯ ಅವರ ‘ಬದ್ಕ್ ಭಾಗ್ಯದ ಬೊಲ್ಪು’, ರಕ್ಷಿತ್ ಬಿ.ಕರ್ಕೇರ ಅವರ ‘ಮಾಯ್ಕದ ಮೆನ್ಪುರಿ’, ಉಮೇಶ್ ಶಿರಿಯ ಅವರ ‘ಮಲ್ಲಿಗೆದ ಜಲ್ಲಿ’ ಹಾಗೂ ‘ಸಂಪಿಗೆದ ಕಮ್ಮೆನ’, ಪದ್ಮನಾಭ ಪೂಜಾರಿ ನೇರಂಬೋಳು ಅವರ ‘ಎಸಲ ಪನಿ’ ಕೃತಿಗಳನ್ನು ಅತಿಥಿಗಳು ಬಿಡುಗಡೆಗೊಳಿಸಲಿದ್ದಾರೆ.
ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಸದಾನಂದ ನಾರಾವಿ, ಡಾ.ಅರುಣ್ ಉಳ್ಳಾಲ್, ಶಶಿರಾಜ್ ರಾವ್ ಕಾವೂರು, ಶಾಂತಾರಾಮ್ ವಿ.ಶೆಟ್ಟಿ, ರಘು ಇಡ್ಕಿದು, ಕುಶಾಲಾಕ್ಷಿ ವಿ.ಕಣ್ವತೀರ್ಥ, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಅನುರಾಧಾ ರಾಜೀವ್ ಸುರತ್ಕಲ್, ವಿಜಯಲಕ್ಷ್ಮೀ ಕಟೀಲ್ ಮತ್ತಿತರರು ಭಾಗವಹಿಸಲಿದ್ದಾರೆ. ‘ಬಾನದಾರೆ’ ತುಳು ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ಶಾಂತಾರಾಮ್ ವಿ.ಶೆಟ್ಟಿ ಅಧ್ಯಕ್ಷತೆ ವಹಿಸುವರು. 36 ಮಂದಿ ಕವಿಗಳು ಕವನ ವಾಚಿಸಲಿದ್ದಾರೆ ಎಂದು ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.