
ಮಂಗಳೂರು : ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಪರಸ್ಪರ ಪೂರಕವಾಗಿದ್ದು, ಕನ್ನಡದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಎರಡೂ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸಿವೆ. ಒಂದು ದೇಶದ ಬಲಿಷ್ಠತೆ ಅಲ್ಲಿನ ಉತ್ತಮ ಸಾಹಿತ್ಯದ ಮೂಲಕ ವ್ಯಕ್ತವಾಗುತ್ತದೆ ಎಂದು ರಂಗಕರ್ಮಿ ಹಾಗೂ ನಿರ್ದೇಶಕರಾದ ಶ್ರೀ ಜನ್ನಿ (ಜನಾರ್ಧನ್), ರಂಗಾಯಣ ಮೈಸೂರು, ತಿಳಿಸಿದರು.
ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಕನ್ನಡ ಭಾಷಾ ವಿಭಾಗ, ಭಾಷಾ ಸಂಗಮ, ಐಕ್ಯೂಎಸಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘ (ವಿಕಾಸ) ಇವರ ಸಹಯೋಗದಲ್ಲಿ “ಕನ್ನಡ ಸಾಹಿತ್ಯ ಮತ್ತು ರಂಗಭೂಮಿ” ಎಂಬ ವಿಷಯದ ಕುರಿತು ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷವಾಗಿ ಸಾಹಿತ್ಯ ಕೃತಿಗಳನ್ನು ರಂಗರೂಪಕ್ಕೆ ತರುವ ಸಂದರ್ಭದಲ್ಲಿ ಮೂಲ ಕೃತಿಯ ಆಶಯವನ್ನು ಉಳಿಸಿಕೊಂಡು, ಅದನ್ನು ರಂಗಭಾಷೆಗೆ ಪರಿವರ್ತಿಸುವ ಸೃಜನಶೀಲ ಪ್ರಕ್ರಿಯೆ ಅತ್ಯಂತ ಸೂಕ್ಷ್ಮವಾದದ್ದು. ಲೇಖಕನ ಕಲ್ಪನೆ, ನಿರ್ದೇಶಕನ ದೃಷ್ಟಿಕೋನ, ನಟನ ಅಭಿನಯ, ರಂಗವಿನ್ಯಾಸ, ಬೆಳಕು, ಸಂಗೀತ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆ—ಇವೆಲ್ಲವೂ ಸೇರಿ ಒಂದು ಸಾಹಿತ್ಯ ಕೃತಿಯನ್ನು ಜೀವಂತ ರಂಗಾನುಭವವನ್ನಾಗಿ ರೂಪಿಸುತ್ತವೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಕಾಲೇಜಿನ ಸಂಚಾಲಕರಾದ ರೆ. ಫಾ. ಇವನ್ ಮೈಕೆಲ್ ರೋಡ್ರಿಗಸ್ ಮಾತನಾಡಿ, ಇದು ಕೇವಲ ಸಾಹಿತ್ಯ ಮತ್ತು ರಂಗಭೂಮಿಯ ಕುರಿತು ಚರ್ಚಿಸುವ ವೇದಿಕೆಯಾಗಿರದೆ, ಸಾಹಿತ್ಯವನ್ನು ರಂಗಭೂಮಿಯೊಂದಿಗೆ, ರಂಗಭೂಮಿಯನ್ನು ಸಮಾಜದೊಂದಿಗೆ ಹಾಗೂ ಯುವಜನತೆಯನ್ನು ಸೃಜನಶೀಲತೆಯೊಂದಿಗೆ ಬೆಸೆಯುವ ಮಹತ್ವದ ಪ್ರಯತ್ನವಾಗಿದೆ ಎಂದರು.
ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಅವರು ವಿಚಾರ ಸಂಕಿರಣದ ಸಂಶೋಧನಾ ಲೇಖನಗಳ ಪುಸ್ತಕವನ್ನು ಬಿಡುಗಡೆ ಮಾಡಿದರು. ಪಾಂಡಿಚೇರಿ ವಿಶ್ವವಿದ್ಯಾನಿಲಯದ ಪ್ರದರ್ಶನ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪವಿತ್ರ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ರೆ. ಡಾ. ಆಲ್ವಿನ್ ಸೆರಾವೊ, ಡಾ. ಮಹೇಶ್ ಎಂ., ಕನ್ನಡ ಸಹಾಯಕ ಪ್ರಾಧ್ಯಾಪಕರು, ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಆಫ್ ಲಾ (CAIL), ಬೆಂಗಳೂರು, ಹಾಗೂ ವಿಕಾಸದ ಅಧ್ಯಕ್ಷರಾದ ಡಾ. ಚಿನ್ನಸ್ವಾಮಿ ಎನ್. ಸೇರಿದಂತೆ ವಿವಿಧ ಅಧ್ಯಾಪಕರು, ರಂಗಾಸಕ್ತರು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರಿಂದ ಕಥೆ ಮತ್ತು ಕವನಗಳನ್ನು ಆಧರಿಸಿದ ‘ಮಹಾ ಇಳೆ’ ಎಂಬ ರಂಗರೂಪ ಪ್ರದರ್ಶನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಕೇರಳ ಕೇಂದ್ರ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಮಾಧವ ಎಂ.ಕೆ. ಅವರು ಸಮಾರೋಪ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಂಯೋಜಕಿ ಶೆಟ್ಟಿ ಸ್ವಾಗತಿಸಿದರು. ಭಾಷಾ ವಿಭಾಗದ ಮುಖ್ಯಸ್ಥರಾದ ಸೌಮ್ಯಾ ಕೋಟ್ಯಾನ್ ವಂದಿಸಿದರು. ಉಪನ್ಯಾಸಕಿ ಪ್ರಿಯಾ ಭಟ್ ನಿರೂಪಿಸಿದರು.
