ಇರಾನ್ ಸಂಪೂರ್ಣ ನಾಶಕ್ಕೆ ಒಂದೇ ರಾತ್ರಿ ಸಾಕು ; ಇಂದೇ ಆ ರಾತ್ರಿಯಾಗಬಹುದು : ಟ್ರಂಪ್ ಖಡಕ್ ಎಚ್ಚರಿಕೆ..!

0
20

ವಾಷಿಂಗ್ಟನ್ : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಹಿಂದೆಂದೂ ಕಾಣದ ಆಕ್ರಮಣಕಾರಿ ನಿಲುವನ್ನು ತಳೆದಿದ್ದಾರೆ. “ಇಡೀ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ನಾಶ ಮಾಡುವ ಶಕ್ತಿ ನಮ್ಮಲ್ಲಿದೆ, ಬಹುಶಃ ಆ ರಾತ್ರಿ ಇಂದೇ ಆಗಿರಬಹುದು” ಎಂದು ಹೇಳುವ ಮೂಲಕ ಟ್ರಂಪ್ ಯುದ್ಧದ ಭೀತಿಯನ್ನು ಹೆಚ್ಚಿಸಿದ್ದಾರೆ.

ಕಳೆದ ಐದು ವಾರಗಳಿಂದ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಇರಾನ್ ನೀಡುತ್ತಿರುವ ಸವಾಲುಗಳಿಗೆ ಅಮೆರಿಕ ಮಂಗಳವಾರದವರೆಗೂ ಅಂತಿಮ ಗಡುವು ನೀಡಿದೆ.

ಅಮೆರಿಕದ ಕಾಲಮಾನ ಮಂಗಳವಾರ ರಾತ್ರಿ 8:00 ಗಂಟೆ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 5:30).ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಮತ್ತು ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರೆಯಬೇಕು. ಒಂದು ವೇಳೆ ಇರಾನ್ ಈ ಗಡುವಿನೊಳಗೆ ಸ್ಪಂದಿಸದಿದ್ದರೆ, ಆ ದೇಶದ ಇಂಧನ ಸೌಲಭ್ಯಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆಯಿದೆ.

ಇರಾನ್‌ನ ಪ್ರತಿ-ಪ್ರಸ್ತಾಪಗಳು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್, “ನಾವು ಹೇಳಿದಂತೆ ಅವರು ಮಾಡಿದರೆ ಯುದ್ಧವು ಬೇಗನೆ ಕೊನೆಗೊಳ್ಳಬಹುದು. ಆದರೆ ಅವರು ಇನ್ನು ಸರಿಯಾಗಿ ಸ್ಪಂದಿಸುತ್ತಿಲ್ಲ. ಇರಾನ್ ಇಂಧನ ಬೆಲೆ ತೆರಬೇಕಾಗುತ್ತದೆ,” ಎಂದು ಗುಡುಗಿದ್ದಾರೆ.

ಒಂದೆಡೆ ಯುದ್ಧದ ಎಚ್ಚರಿಕೆಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ತೆರೆಮರೆಯಲ್ಲಿ ಶಾಂತಿ ಮಾತುಕತೆಗಳೂ ನಡೆಯುತ್ತಿವೆ. ಅಮೆರಿಕದ ಮಾಧ್ಯಮಗಳ ವರದಿಯ ಪ್ರಕಾರ: ಅಮೆರಿಕ ಮತ್ತು ಇರಾನ್ ನಡುವೆ 45 ದಿನಗಳ ಕದನ ವಿರಾಮ ಏರ್ಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ಸಂಧಾನ ಪ್ರಕ್ರಿಯೆಯಲ್ಲಿ ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ದೇಶಗಳು ಮಧ್ಯಸ್ಥಿಕೆ ವಹಿಸುತ್ತಿವೆ ಎನ್ನಲಾಗಿದೆ. ಜಗತ್ತು ಈಗ ಅತೀವ ಕುತೂಹಲ ಮತ್ತು ಆತಂಕದಿಂದ ಬುಧವಾರ ಬೆಳಗಿನ ಜಾವದ ಬೆಳವಣಿಗೆಗಳಿಗಾಗಿ ಕಾಯುತ್ತಿದೆ.

LEAVE A REPLY

Please enter your comment!
Please enter your name here