ವಾಷಿಂಗ್ಟನ್ : ಭಾರತ ಮೂಲದ 28 ವರ್ಷದ ಯುವಕನೊಬ್ಬನನ್ನು ನಕಲಿ ಪೀಜ್ಜಾ ಆರ್ಡರ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆಸಿ ಗುಂಡಿಕ್ಕಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದಿದೆ. ತೆಲಂಗಾಣದ ಹೈದರಾಬಾದ್ ಮೂಲದ ಅನ್ಶುಲ್ ಕುಂಚ್ (28) ಹತ್ಯೆಗೀಡಾದ ಯುವಕ ಎಂದು ಗುರುತಿಸಲಾಗಿದೆ.
ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಉತ್ತರ ಫಿಲಡೆಲ್ಫಿಯಾದ ವಸತಿ ಸಂಕೀರ್ಣದ ಬಳಿ ಈ ಘಟನೆ ನಡೆದಿದ್ದು, ಇದು ಪೂರ್ವನಿಯೋಜಿತ ಸಂಚು ಎಂಬ ಅನುಮಾನ ವ್ಯಕ್ತವಾಗಿದೆ. ಕುಟುಂಬದವರ ಪ್ರಕಾರ, ಕೇವಲ ಹತ್ಯೆ ಮಾಡುವ ಉದ್ದೇಶದಿಂದಲೇ ನಕಲಿ ಪೀಜ್ಜಾ ಆರ್ಡರ್ ನೀಡಿ ಅನ್ಶುಲ್ ಅವರನ್ನು ಅಲ್ಲಿಗೆ ಕರೆಸಿಕೊಳ್ಳಲಾಗಿತ್ತು.
ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಅನ್ಶುಲ್, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಹೆಚ್ಚುವರಿ ಆದಾಯಕ್ಕಾಗಿ ವಾರಾಂತ್ಯಗಳಲ್ಲಿ ಪಾರ್ಟ್‌ಟೈಮ್ ಪೀಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ಮೂರು ಪೀಜ್ಜಾಗಳನ್ನು ತಲುಪಿಸುವ ಆರ್ಡರ್ ಬಂದಿತ್ತು.
ನಿಗದಿತ ವಿಳಾಸಕ್ಕೆ ತಲುಪಿದ ವೇಳೆ, ಅಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಅನ್ಶುಲ್ ಕೆಲ ಕ್ಷಣಗಳಲ್ಲೇ ದುಷ್ಕರ್ಮಿಗಳ ದಾಳಿಗೆ ಒಳಗಾದರು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು ಮುಖವಾಡಧಾರಿಗಳು ಅವರನ್ನು ಹಿಂಬಾಲಿಸಿ ತಲೆಯ ಹಿಂಭಾಗಕ್ಕೆ ಹತ್ತಿರದಿಂದ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಪರಿಣಾಮ ಅನ್ಶುಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಹಂತಕರು ಯಾವುದೇ ನಗದು, ಮೊಬೈಲ್ ಅಥವಾ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ಯದೆ ಪರಾರಿಯಾಗಿರುವುದು ಪ್ರಕರಣವನ್ನು ಮತ್ತಷ್ಟು ಅನುಮಾನಾಸ್ಪದವಾಗಿಸಿದೆ. ಪೀಜ್ಜಾ ಬಾಕ್ಸ್ ಸಹ ಸ್ಥಳದಲ್ಲೇ ಪತ್ತೆಯಾಗಿದ್ದು, ಇದು ದರೋಡೆಗಾಗಿ ನಡೆದ ಕೃತ್ಯವಲ್ಲ, ಬದಲಾಗಿ ಪೂರ್ವನಿಯೋಜಿತ ಹತ್ಯೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಅನ್ಶುಲ್ ಅವರ ಸಹೋದರಿ ತನ್ವಿ ಮಾಧ್ಯಮಗಳ ಮುಂದೆ ಭಾವುಕರಾಗಿ ಮಾತನಾಡಿದ್ದು, “ಅವನಿಗೆ ಅಮೆರಿಕಕ್ಕೆ ಹೋಗುವ ಆಸೆ ಇರಲಿಲ್ಲ. ಕುಟುಂಬದ ಭವಿಷ್ಯಕ್ಕಾಗಿ ಹೋಗಿದ್ದ. ಆದರೆ ಕತ್ತಲು ರಸ್ತೆಯಲ್ಲಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ದಯವಿಟ್ಟು ನಿಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುವ ಮೊದಲು ಸುರಕ್ಷತೆಯ ಬಗ್ಗೆ ಯೋಚಿಸಿ,” ಎಂದು ಕಣ್ಣೀರಿಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ ಸಂತಾಪ ಸೂಚಿಸಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಮೃತದೇಹವನ್ನು ಭಾರತಕ್ಕೆ ತರಲು ಅಗತ್ಯ ಕಾನೂನು ನೆರವು ಒದಗಿಸಲಾಗುವುದು ಎಂದು ತಿಳಿಸಿದೆ.
ಪ್ರಸ್ತುತ ಫಿಲಡೆಲ್ಫಿಯಾ ಪೊಲೀಸರು ಆರೋಪಿಗಳ ಪತ್ತೆಗೆ 20,000 ಡಾಲರ್ (ಸುಮಾರು 19 ಲಕ್ಷ ರೂಪಾಯಿ) ಬಹುಮಾನ ಘೋಷಿಸಿದ್ದು, ನಕಲಿ ಆರ್ಡರ್ ನೀಡಿದ ಫೋನ್ ಸಂಖ್ಯೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

