ಕರ್ನಾಟಕ ಶಿಕ್ಷಣ ಇಲಾಖೆ ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ 18 ದಿನ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಆ ಮೂಲಕ ಶಾಲಾ ಮಕ್ಕಳಿಗೆ ಭರ್ಜರಿ ರಜೆ ನೀಡಲಾಗಿದೆ. ಆದರೆ ಗಾಂಧಿ ಜಯಂತಿ ಮತ್ತು ಶಾಸ್ತ್ರಿ ಜಯಂತಿ ಆಚರಣೆಗೆ ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಮೈಸೂರು ವಿಶ್ವವಿಖ್ಯಾತ ದಸರಾಗೆ ಸಜ್ಜಾಗಿದೆ. ಚಿನ್ನದ ಅಂಬಾರಿ ಹೊತ್ತು ಮೆರೆಯೋಕೆ ಗಜಪಡೆಯೂ ರೆಡಿಯಾಗಿದೆ. ಅರಮನೆಯಲ್ಲಿ ಖಾಸಗಿ ದರ್ಬಾರ್ಗೆ ಕೌಂಟ್ಡೌನ್ ಕೂಡ ಶುರುವಾಗಿದೆ. ಹೀಗಿರುವಾಗಲೇ ನಾಡಹಬ್ಬ ದಸರಾ ಮಹೋತ್ಸವವನ್ನು ಮಕ್ಕಳು ಸಹ ನೋಡಿ ಕಣ್ತುಂಬಿಕೊಳ್ಳಲಿ ಎಂದು ಶಿಕ್ಷಣ ಇಲಾಖೆ ನಾಳೆಯಿಂದ 18 ದಿನ ಸರ್ಕಾರಿ ಶಾಲೆಗಳಿಗೆ ಹಬ್ಬದ ರಜೆ ಘೋಷಣೆ ಮಾಡಿದೆ.
ಎರಡು ದಿನ ಹೊರತು ಪಡಿಸಿ 18 ದಿನ ರಜೆ
ಈ ಬಗ್ಗೆ ಶಿಕ್ಷಣ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದ್ದು, ನಾಳೆಯಿಂದ ಅಂದರೆ ಸೆ. 20 ರಿಂದ ಅಕ್ಟೋಬರ್ 7ರವರೆಗೆ ಸರ್ಕಾರಿ ಶಾಲೆಗಳಿಗೆ ಒಟ್ಟು 18 ದಿನ ಹಬ್ಬದ ರಜೆ ಘೋಷಿಸಿದೆ. ಆದರೆ ಕಡ್ಡಾಯವಾಗಿ ಅಕ್ಟೋಬರ್ 2ರಂದು ನಡೆಯಲಿರುವ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

