ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆಯಾಗಿ ಪದ್ಮಶ್ರೀ ಭಟ್ ನಿಡ್ಡೋಡಿ ಮರುನೇಮಕ

0
14

ಮೂಡುಬಿದಿರೆ: ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು (ಯುನೆಸ್ಕೋ ಮಾನ್ಯತೆ ಪಡೆದ ಸಂಸ್ಥೆ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮೂಡುಬಿದಿರೆ ತಾಲೂಕು ಘಟಕವನ್ನು ಪುನರಚನೆ ಮಾಡಲಾಗಿದ್ದು, ಸಮಾಜಸೇವಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅವರನ್ನು ಸತತ ಎರಡನೇ ಅವಧಿಗೆ ತಾಲೂಕು ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ.

ರಾಜ್ಯ ಘಟಕದ ಸಂಪೂರ್ಣ ಅನುಮೋದನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರು ನೇಮಕಾತಿ ಆದೇಶವನ್ನು ಪ್ರಕಟಿಸಿದ್ದಾರೆ.

ಪುನರಚನೆಯಾದ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಭುವನಾಭಿರಾಮ ಉಡುಪ ಹಾಗೂ ಅಗರಿ ರಾಘವೇಂದ್ರ ರಾವ್ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಅಭಿಷೇಕ್ ಶೆಟ್ಟಿ ಐಕಳ, ಪ್ರಧಾನ ಕಾರ್ಯದರ್ಶಿಗಳಾಗಿ ಮಲ್ಲಿಕಾ ಸುಖೇಶ್ ಮತ್ತು ಗೀತಾ ಎಂ., ಕಾರ್ಯದರ್ಶಿಯಾಗಿ ಸದಾನಂದ ನಾರಾವಿ, ಸಂಚಾಲಕರಾಗಿ ಚೇತನಾ ಹೆಗ್ಡೆ, ಕೋಶಾಧಿಕಾರಿಯಾಗಿ ಶೇಕ್ ಲತೀಪ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಮನಾ ಪ್ರಸಾದ್, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಹಾಸ ದೇವಾಡಿಗ ಹಾಗೂ ಪತ್ರಿಕಾ ಪ್ರತಿನಿಧಿಯಾಗಿ ರಘುನಾಥ್ ಕಾಮತ್ ಕೆಂಚನಕೆರೆ ಅವರನ್ನು ನೇಮಕ ಮಾಡಲಾಗಿದೆ.

ಇದೇ ವೇಳೆ, ಗೌರವ ಸಲಹೆಗಾರರಾಗಿ ನಾಗರಾಜ ಶೆಟ್ಟಿ ಅಂಬೂರಿ, ರಾಮಕೃಷ್ಣ ಶಿರೂರು ಹಾಗೂ ವೇದಾವತಿ ಎಂ. ಕಾರ್ಯನಿರ್ವಹಿಸಲಿದ್ದು, ಕಾನೂನು ಸಲಹೆಗಾರರಾಗಿ ಆಶಾಲತ ಎಚ್ ಅವರನ್ನು ನೇಮಿಸಲಾಗಿದೆ. ತಾಲೂಕು ಉಸ್ತುವಾರಿಯಾಗಿ ಜಿಲ್ಲಾ ಉಪಾಧ್ಯಕ್ಷ ಮಂದಾರ ರಾಜೇಶ್ ಭಟ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮೂಡುಬಿದಿರೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಜಾನಪದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉತ್ತೇಜಿಸುವ ಉದ್ದೇಶದಿಂದ 50 ಮಂದಿ ಸದಸ್ಯರನ್ನು ಒಳಗೊಂಡ ಜಾನಪದ ತಂಡವನ್ನು ರಚಿಸಲಾಗಿದೆ. ಈ ತಂಡದ ಮೂಲಕ ಜಾನಪದ ಕಲೆ, ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪರಂಪರೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪರಿಷತ್ತು ತಿಳಿಸಿದೆ.

LEAVE A REPLY

Please enter your comment!
Please enter your name here