ಉಡುಪಿ : ಸನಾತನ ಧರ್ಮಕ್ಕೆ ಆಂತರಿಕವಾಗಿ ಬಹಿರಂಗವಾಗಿ ಬಗೆಯ ಬಗೆಯ ಸವಾಲುಗಳು ಎದುರಾಗಿವೆ. ಆದರೆ ಹಿಂದುಗಳು ಒಗ್ಗಟ್ಟನ್ನು ಬಿಡದೇ ಸವಾಲುಗಳನ್ನು ಎದುರಿಸಬೇಕು. ಮನೆ, ಬಡಾವಣೆ ಊರು ಕೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ರಾಷ್ಟ್ರದ ಉತ್ತಮ ನಾಗರಿಕರಾಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರನ್ನತಿರ್ಥ ಸ್ವಾಮೀಜಿ ಕರೆ ನೀಡಿದರು.
ಭಾನುವಾರ ನವದೆಹಲಿಯ ರೋಹಿಣಿ ಕ್ಷೇತ್ರದ ಸೆಕ್ಟರ್ 4ರಲ್ಲಿ ದಲಿತರ ಬಡಾವಣೆಯಲ್ಲಿ ವಿವಿಧ ಮನೆಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಬಡಾವಣೆಯ ಸ್ವಚ್ಛತೆ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕು. ಹಳೆಯ ಮನೆಗಳನ್ನು ಕಾರ್ಪೊರೇಟ್ ಕಂಪೆನಿಗಳ ಸಹಾಯ ಪಡೆದು ದುರಸ್ತಿಗೊಳಿಸುವಂತೆ ಸ್ಥಳಿಯ ಜನಪ್ರತಿನಿಧಿಗಳಿಗೆ ಸೂಚಿಸಿದರು. ಸ್ಥಳಿಯ ಶಾಸಕ ಕುಲವಂತ ರಾಣಾ ಉಪಸ್ಥಿತರಿದ್ದರು.
ಶ್ರೀಗಳಿಗೆ ಆತ್ಮೀಯ ಸ್ವಾಗತ
ಬಡವಣೆಯ 300ಕ್ಕೂ ಅಧಿಕ ಮಂದಿ ಶ್ರೀಗಳನ್ನು ಹೂವಿನ ಮಳೆಗರೆದು ಬಡಾವಣೆಯ ರಸ್ತೆಗಳಲ್ಲಿ ರಂಗೋಲಿಯಿಂದ ಅಲಂಕರಿಸಿ ಭಕ್ತಿಯಿಂದ ಸ್ವಾಗತಿಸಿದರು. ಆರಂಭದಲ್ಲಿ 5 ಮನೆಗಳಿಗೆ ತೆರಳಿ ಶ್ರೀ ಮಠದ ವತಿಯಿಂದ ನೀಡಿದ ಅಯೋಧ್ಯೆ ಶ್ರೀರಾಮ ಹಾಗೂ ಉಡುಪಿ ಕೃಷ್ಣನ ಫೋಟೋಗಳನ್ನಿಟ್ಡು ದೀಪಗಳನ್ನು ಬೆಳಗಿದರು. ಮನೆಮಂದಿಗೆ ಹತ್ತು ಬಾರಿ ರಾಮಮಂತ್ರವನ್ನು ಉಪದೇಶಿಸಿ, ಪ್ರಸಾದ ನೀಡಿ ಆಶೀರ್ವದಿಸಿದರು.

