ದಕ್ಷಿಣ ಆಫ್ರಿಕಾದಿಂದ ಲಾಯಿಲದ ದಾಮೋದರ ಗೌಡರ ಮೃತದೇಹ ಊರಿಗೆ ತರಲು ಜನಪ್ರತಿನಿಧಿಗಳ ಸಹಕಾರ

0
43

ದಕ್ಷಿಣ ಆಫ್ರಿಕಾದಲ್ಲಿ ಅಂತ್ಯಕ್ರಿಯೆಯಾಗಲಿದ್ದ ಲಾಯಿಲದ ದಾಮೋದರ ಗೌಡರವರ ಮೃತದೇಹವನ್ನು ಊರಿಗೆ ತರುವಲ್ಲಿ ಸಹಕರಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿವಾಸಿ ದಾಮೋದರ ಗೌಡ ಅವರು ಮಧ್ಯ ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದು, ಕಳೆದ ಡಿಸೆಂಬರ್ 28ರಂದು ಹೃದಯಾಘಾತದಿಂದ ನಿಧನರಾದರು.

ಪರದೇಶದಲ್ಲಿ ಅಕಾಲಿಕವಾಗಿ ಸಂಭವಿಸಿದ ಈ ದುರ್ಘಟನೆಯ ಬಳಿಕ ಮೃತದೇಹವನ್ನು ಊರಿಗೆ ತರುವುದು ಹೇಗೆ ಎಂಬ ಗೊಂದಲ ಮತ್ತು ವೇದನೆಯಲ್ಲಿ ಕುಟುಂಬ ಸಿಲುಕಿತ್ತು. ಅಜ್ಞಾತ ದೇಶ, ಅಧಿಕ ವೆಚ್ಚ, ಕಾನೂನು ಪ್ರಕ್ರಿಯೆಗಳು ಕುಟುಂಬಕ್ಕೆ ದೊಡ್ಡ ಸವಾಲಾಗಿದ್ದವು.

ಈ ಸಂಕಷ್ಟದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೆಚ್ಚಿನ ಸಂಸದರಾದ ಮಾನ್ಯ ಬ್ರಿಜೇಶ್ ಚೌಟರವರು ನೆರವಿಗೆ ಬಂದರು. ಕುಟುಂಬಸ್ಥರು ದೂರವಾಣಿ ಮೂಲಕ ಸಂಸದರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದ ತಕ್ಷಣವೇ ಅವರು ಸ್ಪಂದಿಸಿ, ಕ್ಯಾಮರೂನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ಮೃತದೇಹವನ್ನು ಆದಷ್ಟು ಬೇಗ ಊರಿಗೆ ತಲುಪಿಸುವ ವ್ಯವಸ್ಥೆಗೆ ಸಹಕಾರ ನೀಡಿದರು.

ಅಲ್ಲಿನ ವೈದ್ಯಕೀಯ ವೆಚ್ಚ, ಮೃತದೇಹ ಸಂರಕ್ಷಣೆ, ವಿಮಾನ ಸಾಗಣೆ ವೆಚ್ಚ ಸೇರಿದಂತೆ ಸುಮಾರು ರೂ. 8 ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆ ಎದುರಾಗಿದ್ದು, ಇದನ್ನು ಕುಟುಂಬ ಭರಿಸಲು ಅಸಾಧ್ಯವಾಗಿತ್ತು. ಈ ವೇಳೆ ಕ್ಯಾಮರೂನ್‌ನಲ್ಲಿ ನೆಲೆಸಿರುವ ಭಾರತೀಯ ಬಂಧುಗಳು ಮತ್ತು ಹಿತೈಷಿಗಳು ಸಹಾಯ ಹಸ್ತ ನೀಡಿ ಅಗತ್ಯ ಹಣ ಸಂಗ್ರಹಿಸಿ ಮೃತದೇಹವನ್ನು ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಲು ನೆರವಾದರು.

ಬೆಂಗಳೂರಿನಿಂದ ಲಾಯಿಲ ಗ್ರಾಮಕ್ಕೆ ಅಂಬ್ಯುಲೆನ್ಸ್ ಮೂಲಕ ಮೃತದೇಹ ಸಾಗಿಸುವುದೂ ಕುಟುಂಬಕ್ಕೆ ಮತ್ತೊಂದು ದೊಡ್ಡ ಸವಾಲಾಗಿತ್ತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಮಾನ್ಯ ಹರೀಶ್ ಪೂಂಜರವರು ಕುಟುಂಬದ ಅಸಹಾಯಕತೆಯನ್ನು ಅರಿತು ತಕ್ಷಣ ಸ್ಪಂದಿಸಿ ಅಂಬ್ಯುಲೆನ್ಸ್ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಮಾನವೀಯತೆ ಮೆರೆದರು.

ಈ ರೀತಿ ವಿದೇಶದಲ್ಲಿ ನಿಧನರಾದ ದಾಮೋದರ ಗೌಡರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ ಅವರಿಗೆ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here