ಭಾರಿ ಅಲೆಗಳ ಹೊಡೆತಕ್ಕೆ ಪರ್ಸಿನ್ ಬೋಟ್ ಜಲಸಮಾಧಿ

0
111

ಉಡುಪಿ : ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟೊಂದು ಬುಧವಾರ ಗಂಗೊಳ್ಳಿ ಅಳಿವೆ ಪ್ರದೇಶದ ಸಮುದ್ರದಲ್ಲಿ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ. ಬೋಟಿನಲ್ಲಿದ್ದ ಎಲ್ಲಾ 27 ಮಂದಿ ಮೀನುಗಾರರನ್ನು ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಸಕಾಲದಲ್ಲಿ ರಕ್ಷಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಭಟ್ಕಳದ ಮುಂಡಳ್ಳಿ ಮೂಲದ ನಾಗರಾಜ ಮೊಗೇರ ಅವರಿಗೆ ಸೇರಿದ ‘ಶ್ರೀ ಬಾಲಾಂಜನೇಯ’ ಹೆಸರಿನ ಪರ್ಸಿನ್ ಬೋಟಿನಲ್ಲಿ 27 ಮಂದಿ ಮೀನುಗಾರರು ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಬಂದರಿನಿಂದ ಅನತಿ ದೂರದಲ್ಲಿರುವ ಅಳಿವೆ ಪ್ರದೇಶವನ್ನು ದಾಟುತ್ತಿದ್ದ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ಬೋಟಿನೊಳಗೆ ನೀರು ನುಗ್ಗಲಾರಂಭಿಸಿತು.

ಬೋಟ್ ಮುಳುಗುವ ಅಪಾಯವನ್ನು ಅರಿತ ಮೀನುಗಾರರು ಕೂಡಲೇ ಗಂಗೊಳ್ಳಿ ಬಂದರಿನಲ್ಲಿದ್ದ ಇತರ ಬೋಟ್‌ಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳೀಯ ಮೀನುಗಾರರು ಹಾಗೂ ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸರು ಎರಡು ಬೋಟ್‌ಗಳಲ್ಲಿ ಸಮುದ್ರಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಅಪಾಯದಲ್ಲಿದ್ದ ಎಲ್ಲಾ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತರಲಾಯಿತು. ಸಮಯೋಚಿತ ರಕ್ಷಣಾ ಕಾರ್ಯಾಚರಣೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಈ ನಡುವೆ ಭಾರಿ ಅಲೆಗಳ ಅಬ್ಬರದಿಂದ ಬೋಟ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಬೆಲೆಬಾಳುವ ಮೀನುಗಾರಿಕಾ ಬಲೆಗಳು ಹಾಗೂ ಇತರ ಸಲಕರಣೆಗಳು ಸಮುದ್ರಪಾಲಾಗಿವೆ. ಬೋಟ್‌ಗೂ ಭಾರೀ ಹಾನಿಯಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾಗಶಃ ಮುಳುಗಿರುವ ಬೋಟನ್ನು ದಡಕ್ಕೆ ಎಳೆದು ತರಲು ಸಾಧ್ಯವಾಗಿಲ್ಲ. ಹವಾಮಾನ ಹಾಗೂ ಸಮುದ್ರದ ಪರಿಸ್ಥಿತಿ ಅನುಕೂಲಕರವಾದ ಬಳಿಕ ಬೋಟ್‌ನ್ನು ಮೇಲಕ್ಕೆತ್ತಿ ದಡಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿದುಬಂದಿದೆ.

ಘಟನೆಯಿಂದ ಗಂಗೊಳ್ಳಿ ಮೀನುಗಾರಿಕಾ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮೀನುಗಾರರು ಸಮುದ್ರಕ್ಕೆ ತೆರಳುವ ಸಂದರ್ಭದಲ್ಲಿ ಅಳಿವೆ ಪ್ರದೇಶದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯ ಮತ್ತೊಮ್ಮೆ ಎತ್ತಿ ತೋರಿಸಿದೆ.