ನೀಟ್ ವಿವಾದದ ನಡುವೆಯೇ ಪ್ರಧಾನಿ ಮೋದಿ ಹೊಸ ವಿಡಿಯೋ : ‘ಥ್ಯಾಂಕ್ಯೂ ಫ್ರೆಂಡ್ಸ್’ ಸಂದೇಶ

0
78

ನವದೆಹಲಿ : ದೇಶಾದ್ಯಂತ ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ವಿದ್ಯಾರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿ ಯುವಕರಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಇದು ಅವರ ಎರಡನೇ ವಿಡಿಯೋ ಸಂದೇಶವಾಗಿದೆ.

ವಿಡಿಯೋದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಥ್ಯಾಂಕ್ಯೂ ಫ್ರೆಂಡ್ಸ್. ನಿನ್ನೆ ನಿಮ್ಮನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ನನ್ನ ವಿಡಿಯೋಗೆ ನೀವು ನೀಡಿದ ಪ್ರತಿಕ್ರಿಯೆ, ಪ್ರೋತ್ಸಾಹ ಹಾಗೂ ಅಮೂಲ್ಯ ಸಲಹೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಹೇಳಿದ್ದಾರೆ.

“ನಿಮ್ಮ ಸಕಾರಾತ್ಮಕ ಸಲಹೆಗಳು ಮತ್ತು ಪ್ರೀತಿ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ದೇಶದ ಯುವಕರು ತೋರಿಸಿರುವ ವಿಶ್ವಾಸವೇ ನಮಗೆ ಮತ್ತಷ್ಟು ಜವಾಬ್ದಾರಿಯನ್ನು ನೀಡುತ್ತದೆ. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ನೀಟ್ ಪರೀಕ್ಷೆಯ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಕುರಿತಂತೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಅವರ ಈ ಸಂದೇಶ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.