ಆಗಸ್ಟ್‌ 1ರಂದು ಮೈಸೂರಿಗೆ ಪ್ರಧಾನಿ ಭೇಟಿ : ‘ವಿವೇಕ ಸ್ಮಾರಕ’ ಲೋಕಾರ್ಪಣೆ

0
34

ಮೈಸೂರು : ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 1ರಂದು ಮೈಸೂರಿಗೆ ಭೇಟಿ ನೀಡಲಿದ್ದು, ರಾಮಕೃಷ್ಣ ಆಶ್ರಮದಲ್ಲಿ ನಿರ್ಮಾಣಗೊಂಡಿರುವ **’ವಿವೇಕ ಸ್ಮಾರಕ’**ವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಬಿಗಿಗೊಳಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿವೆ.

ಪ್ರಧಾನಿ ಮೋದಿ ಅವರು ಮಧ್ಯಾಹ್ನ 2.55ಕ್ಕೆ ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ 3.15ಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ನಗರದ ಓವಲ್ ಮೈದಾನಕ್ಕೆ ತೆರಳಿ, ಬಳಿಕ ರಸ್ತೆ ಮಾರ್ಗವಾಗಿ 3.25ಕ್ಕೆ ವಿವೇಕ ಸ್ಮಾರಕದತ್ತ ಪ್ರಯಾಣಿಸಲಿದ್ದಾರೆ.

ಮಧ್ಯಾಹ್ನ 3.30ರಿಂದ ಸಂಜೆ 5.15ರವರೆಗೆ ರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, **’ವಿವೇಕ ಸ್ಮಾರಕ’**ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ಆಶ್ರಮದ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಆಶ್ರಮದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ಸಾಧ್ಯತೆಯಿದೆ.

ಸಂಜೆ 5.30ಕ್ಕೆ ಓವಲ್ ಮೈದಾನಕ್ಕೆ ಮರಳಿದ ಪ್ರಧಾನಿ ಮೋದಿ ಅವರು ಅಲ್ಲಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ, 5.55ಕ್ಕೆ ವಿಶೇಷ ವಿಮಾನದ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿವಿಧ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ ಹಾಗೂ ಮಾರ್ಗ ಬದಲಾವಣೆ ಜಾರಿಯಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.