ನ. 28ಕ್ಕೆ ಕೃಷ್ಣಮಠಕ್ಕೆ ಪ್ರಧಾನಿ ಭೇಟಿ ಸಾದ್ಯತೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

0
127

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿ ಕೃಷ್ಣಮಠಕ್ಕೆ ನವೆಂಬರ್ 28ರಂದು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಅಗತ್ಯ ಪೂರ್ವತಯಾರಿಗಳು ಆರಂಭಗೊಂಡಿದ್ದು, ಬಹುತೇಕ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಹಲವು ವರ್ಷಗಳ ನಂತರ ಪ್ರಧಾನ ಮಂತ್ರಿಗಳು ಉಡುಪಿಗೆ ಬರುತ್ತಿರುವುದರಿಂದ ಕಾರ್ಯಕರ್ತರಲ್ಲಿ ಸಹಜವಾದ ಸಂಭ್ರಮ ಹಾಗೂ ಉತ್ಸಾಹ ಕಂಡುಬರುತ್ತಿದೆ ಎಂದು ವಿಜಯೇಂದ್ರ ಹೇಳಿದರು.

ಪ್ರಧಾನ ಮಂತ್ರಿಯವರ ರೋಡ್ ಶೋ ಕುರಿತ ಚರ್ಚೆಯೂ ನಡೆಯುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ಹಾಡು ಹಗಲೇ ನಡೆದ ದರೋಡೆ ಪ್ರಕರಣ ನಡೆದಿದೆ. ಇದೇ ರೀತಿಯ ದರೋಡೆ ಘಟನೆ ಬೀದರ್ನಲ್ಲೂ ನಡೆದಿತ್ತು. ಅಕ್ಕಾಗಿ ಇಂದಿಗೂ ಸೂಕ್ತ ಉತ್ತರ ಕಂಡುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯದ ಗೃಹ ಸಚಿವರಿಗೆ ಯಾವುದೇ ವಿಚಾರದ ಬಗ್ಗೆ ಸರಿಯಾದ ಮಾಹಿತಿ ಇರುವುದೇ ಇಲ್ಲ. ಗೃಹ ಸಚಿವರು ಸಂಪೂರ್ಣವಾಗಿ ಅಸಹಾಯಕರಾಗಿದ್ದಾರೆ. ಈ ರೀತಿಯ ಘಟನೆಗಳು ರಾಜ್ಯದಲ್ಲಿ ಪದೇಪದೇ ಮರುಕಳಿಸುವುದು ಅತ್ಯಂತ ಗಂಭೀರ ವಿಚಾರ ಎಂದು ವಿಜಯೇಂದ್ರ ಹೇಳಿದ್ದಾರೆ.

ರಾಜ್ಯ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

“ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ, ಅಭಿವೃದ್ಧಿ ಕೆಲಸಗಳು ನಡೆದೇ ನಡೆಯುತ್ತಿಲ್ಲ. ಮುಖ್ಯಮಂತ್ರಿಗಳ ಕುರ್ಚಿಗಾಗಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚುತ್ತಿದೆ. ಆಡಳಿತ ಪಕ್ಷದ ಶಾಸಕರು, ಮಂತ್ರಿಗಳೇ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ವಿಜಯೇಂದ್ರ ಆರೋಪಿಸಿದರು.

ರಾಜ್ಯದಲ್ಲಿ ಚುನಾಯಿತ ಸರ್ಕಾರವಿದೆ ಎಂಬ ಭಾವನೆ ಜನರಲ್ಲಿ ಮರೆಯಾಗುತ್ತಿದೆ. ಸರ್ಕಾರ ಬಡವರ, ರೈತರ, ಹಿಂದುಗಳ ವಿರುದ್ಧ ನಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿಯ ಮೇಲೆ ಯಾವುದೇ ಚರ್ಚೆಯಾಗುತ್ತಿಲ್ಲ. ಕ್ರಾಂತಿಗಳ ಬಗ್ಗೆ ಮಾತನಾಡುತ್ತ ಕುಳಿತಿದ್ದಾರೆ. ಅವರ ಹೇಳಿಕೆಗಳನ್ನು ನೋಡಿದರೆ, ಅರ್ಧದಷ್ಟು ಮಂತ್ರಿಗಳು ಮುಖ್ಯಮಂತ್ರಿಯನ್ನು ಬದಲಾಯಿಸಲು ಒತ್ತಾಯಿಸುತ್ತಿರುವುದು ಗೋಚರಿಸುತ್ತದೆ ಎಂದು ಹೇಳಿದರು

LEAVE A REPLY

Please enter your comment!
Please enter your name here