ತಾಕೊಡೆ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಗೊಂದಲ, ಪ್ರತಿಭಟನೆ, ಬಹಿಷ್ಕಾರ

0
138


ವರದಿ ರಾಯಿ ರಾಜ ಕುಮಾರ
ತಾಕೊಡೆ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆಯಬೇಕಿದ್ ಚುನಾವಣೆಯಲ್ಲಿ ಗೊಂದಲ ಸೃಷ್ಟಿಯಾಗಿ, ಅರ್ಹ ಅಭ್ಯರ್ಥಿ ಎಂದು ಹೇಳಲಾದ ಒಬ್ಬ ಮಹಿಳಾ ನಿರ್ದೇಶಕರನ್ನು ಅನರ್ಹಗೊಳಿಸಿದ ಕಾರಣ ಉಳಿದ ನಿರ್ದೇಶಕರು ಮತ್ತು ಸದಸ್ಯರು ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿಯಲ್ಲಿ ಒಟ್ಟು 12 ನಿರ್ದೇಶಕರ ಸ್ಥಾನಗಳಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 7 ಸ್ಥಾನಗಳ ಬಹುಮತ ಅಗತ್ಯವಿತ್ತು. ಆದರೆ ಚುನಾವಣೆಯಲ್ಲಿ ಕೇವಲ 6 ಮಂದಿ ನಿರ್ದೇಶಕರು ಮಾತ್ರ ಭಾಗವಹಿಸಿದ್ದರಿಂದ, ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಚುನಾವಣೆಯನ್ನು ಒಂದು ವಾರ ಕಾಲ ಮುಂದೂಡಲಾಯ್ತು. ನಿರ್ದೇಶಕರು ತಮ್ಮ ಅಭ್ಯರ್ಥಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.


ಪ್ರತಿಭಟನಕಾರರ ಪ್ರಮುಖ ಆರೋಪಗಳಿಗೆ ನಿರ್ದೇಶಕ ಯಶವಂತ್ ಶೆಟ್ಟಿ ಮಾತನಾಡಿ, ಅರ್ಹತೆ ಹೊಂದಿದ್ದರೂ ಸದಸ್ಯೆ ಪುಷ್ಪಾ ಅವರಿಗೆ ಸ್ಪರ್ಧಿಸುವ ಹಾಗೂ ಮತ ಚಲಾಯಿಸುವ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಸದಸ್ಯರೊಬ್ಬರು ಮತ ಚಲಾಯಿಸಿದ್ದಾರೆ. ನಿಯಮಾನುಸಾರ ಅರ್ಹತೆ ಇದ್ದರೂ, ಪರಿಶಿಷ್ಟ ಜಾತಿಯ ಮಹಿಳೆಗೆ ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಿರುವುದು ಒಳಸಂಚು. ಸಂಬಂಧಪಟ್ಟವರು ಇದರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು. ಕಳೆದ 15ಕ್ಕೂ ಅಧಿಕ ವರ್ಷಗಳಿಂದ ಚುನಾವಣೆ ನಡೆದಿಲ್ಲ. ಕಾರ್ಯದರ್ಶಿಗಳ ಬೇಕಾಬಿಟ್ಟಿ ವರ್ತನೆ ಇದೆ ಎಂದು ಆರೋಪಿಸಿದರು.
ಸದಸ್ಯ ಜಾಯ್ಲಸ್ ತಾಕೋಡೆ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಅವ್ಯವಹಾರ ನಡೆದಿದೆ. ಇಲ್ಲಿನ ಅವ್ಯವಹಾರಗಳಿಂದ ಸೊಸೈಟಿಯು ಅಧಃಪತನದತ್ತ ಸಾಗಿದೆ ಎಂದರು.
ಪ್ರತಿಭಟನಕಾರರು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಚುನಾವಣಾ ಗೊಂದಲ ಮತ್ತು ಅವ್ಯವಹಾರಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here