90 ವರ್ಷಗಳ ಯಕ್ಷಗಾನ ಮೇಳಗಳ ಯಜಮಾನಿಕೆಗೆ ಸಂದ ಗೌರವ: ಡಾ. ಎಂ. ಪ್ರಭಾಕರ ಜೋಷಿ
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಮೀಪ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯರ ಅಭಿಮಾನಿಗಳು ಮೂರು ದಶಕಗಳ ಹಿಂದೆ ಆರಂಭಿಸಿದ ‘ಪೊಳಲಿ ಯಕ್ಷೋತ್ಸವ’ ಕಾರ್ಯಕ್ರಮವು ಯಕ್ಷಗಾನ ಕಲೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಕಳೆದ 90 ವರ್ಷಗಳಿಂದ ಯಕ್ಷಗಾನ ಮೇಳಗಳ ಯಜಮಾನಿಕೆ ನಡೆಸಿಕೊಂಡು ಬಂದಿರುವ ಕಲ್ಲಾಡಿ ಮನೆತನದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತು ಅನುಪಮಾ ಡಿ. ಶೆಟ್ಟಿ ದಂಪತಿಗೆ ಪ್ರಸಕ್ತ ಸಾಲಿನ ‘ಯಕ್ಷೋತ್ಸವ ಪ್ರಶಸ್ತಿ’ ಸಂದಿರುವುದು ಅರ್ಹ ಗೌರವವಾಗಿದೆ ಎಂದು ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು.
ಪೊಳಲಿ ರಾಜಾಂಗಣದಲ್ಲಿ ಭಾನುವಾರ ಸಂಜೆ ನಡೆದ 31ನೇ ವರ್ಷದ ‘ಪೊಳಲಿ ಯಕ್ಷೋತ್ಸವ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಹಿಮ್ಮೇಳ ಕಲಾವಿದ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ‘ದಿನೇಶ್ ಅಮ್ಮಣ್ಣಾಯ ಸ್ಮೃತಿ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಲಾವಿದ ಉಜಿರೆ ಅಶೋಕ್ ಭಟ್ ಅಭಿನಂದನಾ ಮಾತುಗಳನ್ನಾಡಿದರು. ಅಗಲಿದ ಕಲಾವಿದರಿಗೆ ರವಿ ಅಲೆವೂರಾಯ ಸಂಸ್ಮರಣೆ ಸಲ್ಲಿಸಿದರು. 15 ಮಂದಿ ಹಿರಿಯ ಕಲಾವಿದರನ್ನು ಗೌರವ ನಿಧಿಯೊಂದಿಗೆ ಸನ್ಮಾನಿಸಲಾಯಿತು.
ಕಲಾ ಪ್ರೋತ್ಸಾಹಕರಾದ ಮೂಡುಬಿದಿರೆಯ ಯಕ್ಷ ಸಂಗಮದ ಶಾಂತಾರಾಮ ಕುಡ್ವ, ಪುಳಿಂಚ ಸೇವಾ ಪ್ರತಿಷ್ಠಾನದ ಶ್ರೀಧರ ಶೆಟ್ಟಿ ಪುಳಿಂಚ ಹಾಗೂ ಸಂಘಟಕ ಜಿ. ರಾಘವೇಂದ್ರ ಪುತ್ತೂರಾಯ ಅವರಿಗೆ ‘ಯಕ್ಷ ಕಲಾ’ ಗೌರವ ಸಮರ್ಪಿಸಲಾಯಿತು. ಕದ್ರಿ ನವನೀತ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಂದ್ರ ಪರವ ಕರಿಯಂಗಳ ಅವರನ್ನು ಗೌರವಿಸಲಾಯಿತು.
ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ ಶೆಟ್ಟಿ ಅಮ್ಮುಂಜೆಗುತ್ತು, ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ, ಪ್ರಧಾನ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ಮಾಧವ ಭಟ್ ಪೊಳಲಿ, ಅರ್ಚಕ ಅನಂತ ಪದ್ಮನಾಭ ಭಟ್, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂದ್ರಮೋಹನ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಹಾಗೂ ಕರ್ನಿರೆ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಡಿ. ಸುವರ್ಣ ಕರ್ನಿರೆ ಶುಭ ಹಾರೈಸಿದರು.
ಸಮಿತಿಯ ಸಂಸ್ಥಾಪಕ ಅನಭ ಪೊಳಲಿ, ಪ್ರಮುಖರಾದ ಲೋಕೇಶ್ ಭರಣಿ, ಸುಬ್ರಾಯ ಕಾರಂತ, ಮೋಹನ್ ಬಿಲ್ವಪತ್ರೆ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಸಂಚಾಲಕ ವೆಂಕಟೇಶ ನಾವಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಜನಾರ್ದನ ಅಮ್ಮುಂಜೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
18 ಗಂಟೆಗಳ ಕಾಲ ಯಕ್ಷಗಾನ ಬಯಲಾಟ
ಯಕ್ಷೋತ್ಸವದ ಅಂಗವಾಗಿ ಜಿಲ್ಲೆಯ ಆಯ್ದ ಕಲಾವಿದರಿಂದ ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಒಟ್ಟು 18 ಗಂಟೆಗಳ ಕಾಲ ನಿರಂತರ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ‘ರಾಜಾ ಯಯಾತಿ’, ‘ಇಂದ್ರಕೀಲಕ’ ಹಾಗೂ ‘ರಾಮಾಂಜನೇಯ’ ಎಂಬ ಮೂರು ಪ್ರಸಂಗಗಳು ಪ್ರೇಕ್ಷಕರನ್ನು ರಂಜಿಸಿದವು. ಯಕ್ಷಗಾನ ಕಲಾವಿದರ ಸಾಧನೆ, ಹಿರಿಯರ ಸೇವೆ ಮತ್ತು ಕಲಾ ಪ್ರೋತ್ಸಾಹಕರ ಕೊಡುಗೆಯನ್ನು ಸ್ಮರಿಸುವ ಮೂಲಕ 31ನೇ ವರ್ಷದ ಯಕ್ಷೋತ್ಸವ ಅರ್ಥಪೂರ್ಣವಾಗಿ ನೆರವೇರಿತು.
