ಮಂಗಳೂರಿನ ನಾಗುರಿ ಮತ್ತು ಜಪ್ಪಿನಮೊಗರು ದೇವಸ್ಥಾನದ ಬಳಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೇರಳದ ವೆಲ್ಲಾಡ್ ಒಟ್ಟತ್ತಾಯಿ ನಿವಾಸಿ ಅಲೆಕ್ಸ್ ಡೊಮಿನಿಕ್ (25) ಮತ್ತು ಕಲ್ಲಿಕೋಟೆಯ ಕುರಚೂರು ನಿವಾಸಿ ಅಮಲ್ ಕೃಷ್ಣ (25) ಬಂಧಿತ ಆರೋಪಿಗಳು. ನ.14 ರಂದು ಮಂಗಳೂರಿನ ನಾಗುರಿಯ ಬಸ್ ತಂಗುದಾಣ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್ ಹಾಗೂ ಜೆಪ್ಪಿನಮೊಗರು ಆದಿಮಾಯೆ ದೇವಸ್ಥಾನ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್ ಕಳವು ಮಾಡಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ.30ರಂದು ಮಂಗಳೂರಿಗೆ ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿAದ ಎರಡು ಸ್ಕೂಟರ್ ಹಾಗೂ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೊತ್ತ 1.23 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿ ಅಲೆಕ್ಸ್ ವಿರುದ್ದ ಕೇರಳದ ಅಲಕ್ಕೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಾಗಾಟ ಮಾಡಿರುವ ಪ್ರಕರಣ ಹಾಗೂ ಅಮಲ್ ಕೃಷ್ಣ ನ ವಿರುದ್ದ ತಲಶೇರಿ ಹಾಗೂ ಕುರಚೂಂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ಕಳವು ಮಾಡಿದ ಪ್ರಕರಣಗಳು ದಾಖಲಾಗಿವೆ.

