ಮಂಗಳೂರು : ಗ್ರಾಮೀಣ ಭಾಗಗಳಲ್ಲಿ ನವೀಕರಿಸಬಹುದಾದ ಇಂಧನ ವಲಯದ ಯೋಜನೆಗಳು ನಡೆಯುತ್ತಿದ್ದು, ಈ ಯೋಜನೆಗಳು ಕೇವಲ ವಿದ್ಯುತ್ ತಂತಿಗಳಿಗೆ ಸೀಮಿತವಾಗದೆ, ಹಳ್ಳಿಗಳ ಪಾಲಿಗೆ ಹೊಸ ಆರ್ಥಿಕ ಶಕ್ತಿಯಾಗಿ ಮೂಡಿಬರುತ್ತಿವೆ ಎಂದು ನವೀಕರಿಸಬಹುದಾದ ಇಂಧನ ಯೋಜನೆಗಳ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಸೌರ ಮತ್ತು ಪವನ ಶಕ್ತಿಯನ್ನು ರಾಷ್ಟ್ರೀಯ ಜಾಲಕ್ಕೆ ಸಂಪರ್ಕಿಸಲು ಬೃಹತ್ ಜಾಲಗಳ ಅಗತ್ಯವಿದೆ. ‘ರೆಸೋನಿಯಾ’ ದಂತಹ ಕಂಪನಿಗಳು ಕೃಷಿ ಪ್ರಧಾನ ಪ್ರದೇಶಗಳಲ್ಲಿ ಇಂತಹ ಜಾಲಗಳನ್ನು ವಿಸ್ತರಿಸುತ್ತಿವೆ. ಈ ಯೋಜನೆಗಳ ಪ್ರಾಥಮಿಕ ಗುರಿ ಪರಿಸರ ಸ್ನೇಹಿ ವಿದ್ಯುತ್ ಸಾಗಾಟವಾಗಿದ್ದರೂ, ಇವುಗಳಿಂದ ಹಳ್ಳಿಗಳಲ್ಲಿ ಗಮನಾರ್ಹ ಪರ್ಯಾಯ ಆರ್ಥಿಕ ಲಾಭಗಳು ಉಂಟಾಗುತ್ತಿವೆ.
ಯೋಜನೆಯ ನಿರ್ಮಾಣ ಹಂತದಲ್ಲಿ ಬೇಕಾಗುವ ಸಾಮಗ್ರಿ ಸಾಗಣೆ, ಭೂಮಿ ಸಿದ್ಧಪಡಿಸುವಿಕೆ ಮತ್ತು ತಾಂತ್ರಿಕ ಬೆಂಬಲಕ್ಕಾಗಿ ಸ್ಥಳೀಯ ಕಾರ್ಮಿಕರು ಮತ್ತು ಪೂರೈಕೆದಾರರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಟ್ರ್ಯಾಕ್ಟರ್ ಮಾಲೀಕರು, ಸಾರಿಗೆ ಆಪರೇಟರ್ ಗಳು ಮತ್ತು ಕೂಲಿ ಕಾರ್ಮಿಕರಿಗೆ ತಮ್ಮ ಮನೆಯ ಬಳಿಯೇ ಗೌರವಯುತ ಉದ್ಯೋಗ ದೊರೆಯುತ್ತಿದೆ.
ಈ ಯೋಜನೆಗಳಲ್ಲಿ ಭೂಮಿಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು, ಲೀಸ್ ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ರೈತರು ಭೂಮಿಯ ಮಾಲೀಕತ್ವವನ್ನೂ ಉಳಿಸಿಕೊಳ್ಳಬಹುದು ಮತ್ತು ತಮ್ಮ ಜಮೀನಿನಲ್ಲಿ ವಿದ್ಯುತ್ ಗೋಪುರಗಳನ್ನು ಅಳವಡಿಸಲು ಅವಕಾಶ ನೀಡಿ ಬಾಡಿಗೆ ರೂಪದ ಆದಾಯವನ್ನೂ ಪಡೆಯಬಹುದು. ವಿದ್ಯುತ್ ಗೋಪುರಗಳು ಅಲ್ಪ ಜಾಗವನ್ನು ಮಾತ್ರ ಆಕ್ರಮಿಸುವುದರಿಂದ, ರೈತರು ಬಾಕಿ ಜಮೀನಿನಲ್ಲಿ ಎಂದಿನಂತೆ ಕೃಷಿ ಮುಂದುವರಿಸಬಹುದು. ಮಳೆ ಅಥವಾ ಮಾರುಕಟ್ಟೆ ಏರುಪೇರಿನಿಂದ ಕೃಷಿ ಆದಾಯ ಕುಂಠಿತವಾದಾಗ, ಈ ಸ್ಥಿರವಾದ ಲೀಸ್ ಹಣವು ರೈತ ಕುಟುಂಬಗಳಿಗೆ ಶಿಕ್ಷಣ, ಕೃಷಿ ಹೂಡಿಕೆ ಅಥವಾ ಹೈನುಗಾರಿಕೆಯಂತಹ ಉಪಕಸುಬುಗಳಿಗೆ ನೆರವಾಗುತ್ತದೆ ಎಂದು ಯೋಜನೆಯ ಪರಿಣತರು ತಿಳಿಸಿದ್ದಾರೆ.
ಸುಧಾರಿತ ರಸ್ತೆ ಸಂಪರ್ಕ ಮತ್ತು ಮೂಲಸೌಕರ್ಯ
ಬೃಹತ್ ಯಂತ್ರೋಪಕರಣಗಳ ಸಾಗಾಟಕ್ಕಾಗಿ ಕಂಪನಿಗಳು ಗ್ರಾಮಗಳಲ್ಲಿ ನಿರ್ಮಿಸುವ ಸುಧಾರಿತ ರಸ್ತೆಗಳು, ಯೋಜನೆಯ ನಂತರವೂ ಹಳ್ಳಿಗರ ಬಳಕೆಗೆ ಲಭ್ಯವಾಗುತ್ತಿವೆ. ಇದರಿಂದ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಮತ್ತು ಹತ್ತಿರದ ಪಟ್ಟಣಗಳಿಗೆ ಸಂವಹನ ನಡೆಸಲು ಸುಲಭವಾಗುತ್ತಿದೆ.
ವಲಸೆ ತಡೆಗೆ ಮದ್ದು
ಗ್ರಾಮೀಣ ಯುವಕರು ಕೆಲಸ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುವುದು ದೊಡ್ಡ ಸಮಸ್ಯೆ. ಆದರೆ, ಇಂತಹ ಯೋಜನೆಗಳು ಹಳ್ಳಿಯ ಹತ್ತಿರವೇ ನಿರ್ಮಾಣ ಮತ್ತು ನಿರ್ವಹಣಾ ಕೆಲಸಗಳನ್ನು ನೀಡುವುದರಿಂದ ಯುವಕರು ತಮ್ಮ ಕುಟುಂಬದ ಜೊತೆಗೇ ಇದ್ದು ದುಡಿಯುವಂತಾಗಿದೆ. ಇದು ಗ್ರಾಮೀಣ ಸಮುದಾಯದ ಬಲವರ್ಧನೆಗೆ ಸಹಕಾರಿಯಾಗಿದೆ.
ಸಮುದಾಯದ ಸಹಭಾಗಿತ್ವವೇ ಯಶಸ್ಸಿನ ಸೂತ್ರ
ಯೋಜನೆ ರೂಪಿಸುವ ಕಂಪನಿಗಳು ಮತ್ತು ಗ್ರಾಮಸ್ಥರ ನಡುವೆ ಪಾರದರ್ಶಕ ಸಂವಹನವಿದ್ದಾಗ ಮಾತ್ರ ಇಂತಹ ಬದಲಾವಣೆ ಸಾಧ್ಯ. ಪರಿಹಾರ ಧನ ಮತ್ತು ಆರ್ಥಿಕ ಅವಕಾಶಗಳ ಬಗ್ಗೆ ರೈತರಿಗೆ ಸ್ಪಷ್ಟ ಮಾಹಿತಿ ನೀಡಿದಾಗ, ಅವರು ಇವುಗಳನ್ನು ಕೇವಲ ‘ಹೊರಗಿನ ಹಸ್ತಕ್ಷೇಪ’ ಎಂದು ನೋಡದೆ, ತಮ್ಮ ಅಭಿವೃದ್ಧಿಯ ಭಾಗವೆಂದು ಪರಿಗಣಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಈ ವಿದ್ಯುತ್ ಗೋಪುರಗಳು ಮತ್ತು ತಂತಿಗಳು ಕೇವಲ ತಾಂತ್ರಿಕ ವ್ಯವಸ್ಥೆಯಲ್ಲ; ಅವು ಭಾರತದ ಇಂಧನ ಭದ್ರತೆಯ ಜೊತೆಗೆ ಗ್ರಾಮೀಣ ಜನರ ಬದುಕಿನ ಹೊಸ ಆಶಾದೀಪಗಳಾಗಿವೆ.

