2,500ಕ್ಕೂ ಅಧಿಕ ಮಂದಿ ಭಾಗಿ; ಸ್ವಾಮಿ ಸರ್ವಪ್ರಿಯಾನಂದಜೀ ಅವರಿಗೆ ಮಂಗಳೂರಿನ ಜನತೆಯ ಪರವಾಗಿ ಗೌರವ ಸಮರ್ಪಣೆ
ಮಂಗಳೂರು: ರಾಮಕೃಷ್ಣ ಮಠ, ಮಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ‘ಪ್ರಬೋಧ ’26’ ಉಪನ್ಯಾಸ ಸರಣಿಯ ಎರಡನೇ ದಿನದ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡವು. ಅಮೆರಿಕದ ನ್ಯೂಯಾರ್ಕ್ನ ವೇದಾಂತ ಸೊಸೈಟಿಯ ನಿವಾಸಿ ಸ್ವಾಮೀಜಿ ಹಾಗೂ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಸ್ವಾಮಿ ಸರ್ವಪ್ರಿಯಾನಂದಜೀ ಅವರು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಐದು ವಿಶೇಷ ಉಪನ್ಯಾಸಗಳನ್ನು ನೀಡಿದರು. ಒಟ್ಟು 2,500ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಎರಡನೇ ದಿನದ ಮೊದಲ ಅಧಿವೇಶನವನ್ನು ವೃತ್ತಿಪರರಿಗಾಗಿ ಆಯೋಜಿಸಲಾಗಿತ್ತು. ನಿಟ್ಟೆ (ಡೀಮ್ಡ್ ವಿಶ್ವವಿದ್ಯಾಲಯ)ಯ ಕುಲಪತಿ ಡಾ. ವಿಶಾಲ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ನರೇಂದ್ರ ನಾಯಕ್ ಹಾಗೂ ವರ್ಕ್ವರ್ಕ್ ಕೋ-ವರ್ಕಿಂಗ್ ಸ್ಪೇಸ್ ಮತ್ತು ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥಾಪಕ ರೋಹಿತ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಹಾಗೂ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಂಸ್ಥಾಪಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ವಾಮಿ ಸರ್ವಪ್ರಿಯಾನಂದಜೀ ಅವರು ‘ಶಾಂತಿಯನ್ನು ಕಳೆದುಕೊಳ್ಳದೆ ಯಶಸ್ಸು ಸಾಧಿಸುವುದು’ (Success Without Losing Peace) ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಎರಡನೇ ಅಧಿವೇಶನವನ್ನು ವೈದ್ಯರಿಗಾಗಿ ಆಯೋಜಿಸಲಾಗಿದ್ದು, ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ. ಸಂದೀಪ್ ರೈ ಉದ್ಘಾಟಿಸಿದರು. ಸ್ವಾಮಿ ಜಿತಕಾಮಾನಂದಜೀ ಹಾಗೂ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ‘ಗುಣಪಡಿಸುವ ವೈದ್ಯರನ್ನು ಗುಣಪಡಿಸುವವರು ಯಾರು?’ (Who Heals the Healer?) ಎಂಬ ವಿಷಯದ ಕುರಿತು ಸ್ವಾಮಿ ಸರ್ವಪ್ರಿಯಾನಂದಜೀ ಉಪನ್ಯಾಸ ನೀಡಿ, ವೈದ್ಯರೊಂದಿಗೆ ಸಂವಾದ ನಡೆಸಿದರು.
ಮೂರನೇ ಅಧಿವೇಶನವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು. ಮಂಗಳೂರು ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ್ಹಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ವಾಮಿ ಜಿತಕಾಮಾನಂದಜೀ ಉಪಸ್ಥಿತರಿದ್ದರು.
ಸುಮಾರು 12 ವರ್ಷಗಳ ಬಳಿಕ ಮಂಗಳೂರಿಗೆ ಆಗಮಿಸಿದ ಸ್ವಾಮಿ ಸರ್ವಪ್ರಿಯಾನಂದಜೀ ಅವರನ್ನು ಮಂಗಳೂರಿನ ಜನತೆಯ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಎರಡು ದಿನಗಳಲ್ಲಿ ಐದು ಅಧಿವೇಶನಗಳ ಮೂಲಕ ವಿವಿಧ ಕ್ಷೇತ್ರಗಳ ಜನರಿಗೆ ಆಧ್ಯಾತ್ಮಿಕ ಹಾಗೂ ಜೀವನಮೌಲ್ಯಗಳ ಕುರಿತು ಮಾರ್ಗದರ್ಶನ ನೀಡಿದ ಸ್ವಾಮೀಜಿಯವರ ಉಪನ್ಯಾಸಗಳು ವಿಶೇಷ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಕಲ್ಲಡ್ಕ ಪ್ರಭಾಕರ ಭಟ್, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಹ್ಯಾಂಗ್ಯೋ ಐಸ್ಕ್ರೀಂ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಪ್ರದೀಪ್ ಜಿ. ಪೈ, ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ದಾಮೋದರ್ ಕಾಮತ್, ಎಸ್ಸಿಎಸ್ ಆಸ್ಪತ್ರೆಯ ಅಧ್ಯಕ್ಷ ಡಾ. ಜೀವನ್ರಾಜ್ ಸೊರಕೆ, ಕೆನರಾ ಬ್ಯಾಂಕ್ನ ಆಡಳಿತ ನಿರ್ದೇಶಕ ರಮೇಶ್ ಸೇರಿದಂತೆ ಹಲವು ಗಣ್ಯರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.
ಮೂರನೇ ಅಧಿವೇಶನದಲ್ಲಿ ಸ್ವಾಮಿ ಸರ್ವಪ್ರಿಯಾನಂದಜೀ ಅವರು ‘ಶಾಶ್ವತ ಸಂತೋಷದ ಹುಡುಕಾಟ’ (The Search for Lasting Happiness) ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ‘ಸಿಂಗಿಂಗ್ ದ ಸೇಂಟ್ಸ್’ ತಂಡವು ಮೂರು ಅಧಿವೇಶನಗಳಲ್ಲಿಯೂ ಭಕ್ತಿಗೀತೆ ಹಾಗೂ ಭಜನೆಗಳನ್ನು ಪ್ರಸ್ತುತಪಡಿಸಿತು. ವಿವಿಧ ಅಧಿವೇಶನಗಳಲ್ಲಿ ಡಾ. ಸತೀಶ್ ರಾವ್, ಡಾ. ಕೆ.ಆರ್. ಕಾಮತ್ ಹಾಗೂ ಮಠದ ಸ್ವಯಂಸೇವಕ ರಂಜನ್ ಬೆಳ್ಳಪದಡಿ ವಂದನಾರ್ಪಣೆ ಸಲ್ಲಿಸಿದರು. ಸ್ವಾತಿ ರೈ, ಡಾ. ಪ್ರಿಯಾ ಡಿ. ಆಳ್ವ ಹಾಗೂ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಆಧ್ಯಾತ್ಮಿಕ ಚಿಂತನೆ, ವೃತ್ತಿಪರ ಜೀವನದ ಯಶಸ್ಸು, ವೈದ್ಯಕೀಯ ಸೇವೆಯ ಮೌಲ್ಯ ಹಾಗೂ ಶಾಶ್ವತ ಸಂತೋಷದ ಕುರಿತಾದ ಉಪನ್ಯಾಸಗಳ ಮೂಲಕ ‘ಪ್ರಬೋಧ ’26’ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

