
ಬಂಟ್ವಾಳ: ಅತಿ ಕಿರಿಯ ವಯಸ್ಸಿನಲ್ಲೇ ತನ್ನ ಪ್ರತಿಭೆಯ ಮೂಲಕ ಗಮನ ಸೆಳೆದ ಬಂಟ್ವಾಳ ವಿದ್ಯಾಗಿರಿಯ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪ್ರದ್ಯಾ ವೈ. ಕುಲಾಲ್ ಅವರು ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದು ಶಾಲೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ.
ಕೇವಲ 2 ವರ್ಷ 9 ತಿಂಗಳ ವಯಸ್ಸಿನ ಪ್ರದ್ಯಾ ಅವರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಭಜನೆಗಳನ್ನು ಸುಮಧುರವಾಗಿ ಹಾಡುವುದರ ಜೊತೆಗೆ ಶ್ಲೋಕ ಹಾಗೂ ಮಂತ್ರಗಳನ್ನು ನಿರರ್ಗಳವಾಗಿ ಪಠಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇಷ್ಟು ಕಿರಿಯ ವಯಸ್ಸಿನಲ್ಲಿಯೇ ಅವರಲ್ಲಿರುವ ಅಸಾಧಾರಣ ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರದ್ಯಾ ಅವರು ಬಿ.ಸಿ.ರೋಡ್ ದೈಪಲ ನಿವಾಸಿ ಯಾದವ ಕುಲಾಲ್ ಹಾಗೂ ವಿಜಯಲಕ್ಷ್ಮಿ ದಂಪತಿಯ ಪುತ್ರಿ.
ಪುಟ್ಟ ವಯಸ್ಸಿನಲ್ಲೇ ಗಮನಾರ್ಹ ಸಾಧನೆ ಮಾಡಿ ಶಾಲೆಯ ಗೌರವವನ್ನು ಹೆಚ್ಚಿಸಿದ ಪ್ರದ್ಯಾ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಎಸ್.ವಿ.ಎಸ್. ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಪ್ರದ್ಯಾ ಅವರ ಸಾಧನೆಯನ್ನು ಶ್ಲಾಘಿಸಿ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು ಗಳಿಸುವಂತೆ ಶುಭ ಹಾರೈಸಿದರು.
ಪುಟ್ಟ ವಯಸ್ಸಿನಲ್ಲಿಯೇ ಕನ್ನಡ ಮತ್ತು ತುಳು ಭಾಷೆಗಳ ಭಜನೆ, ಶ್ಲೋಕ ಹಾಗೂ ಮಂತ್ರಗಳ ಮೂಲಕ ಪ್ರತಿಭೆ ಮೆರೆದಿರುವ ಪ್ರದ್ಯಾ ಅವರ ಸಾಧನೆ ಪೋಷಕರಿಗೆ, ಶಾಲೆಗೆ ಹಾಗೂ ಬಂಟ್ವಾಳದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.
