ಉಡುಪಿ : ಟೌನ್ ಹಾಲ್‌ನಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಮುಂಬರುವ ಗಣೇಶೋತ್ಸವ ಹಬ್ಬದ ಅಂಗವಾಗಿ ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಸದಸ್ಯರ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು.
ಸಭೆಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಬ್ಬವನ್ನು ಕಾನೂನುಬದ್ಧವಾಗಿ ಮತ್ತು ಸೌಹಾರ್ದಯುತವಾಗಿ ಆಚರಿಸುವ ಕುರಿತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮೆರವಣಿಗೆ, ಧ್ವನಿವರ್ಧಕಗಳ ಬಳಕೆ, ವಾಹನ ಸಂಚಾರ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಅಗ್ನಿ ಸುರಕ್ಷತೆ ಹಾಗೂ ಪರಿಸರ ಸ್ನೇಹಿ ಆಚರಣೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲೆಯ ವಿವಿಧ ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಉಡುಪಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯಕ್ ಹಾಗೂ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಐಪಿಎಸ್ ಉಪಸ್ಥಿತರಿದ್ದರು.

