ಹೆಜಮಾಡಿಯಲ್ಲಿ ಭಾರತ್ ಜೋಡೋ ಟ್ರೋಫಿ–2026ಕ್ಕೆ ಸಜ್ಜು – ಅ.2ರಂದು ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಬೃಹತ್ ಭಾರತ್ ಜೋಡೋ ರ‍್ಯಾಲಿ

0
29

ಕಾಪು : ಕ್ರೀಡೆಯ ಮೂಲಕ ಯುವಶಕ್ತಿಯನ್ನು ಒಗ್ಗೂಡಿಸಿ, ಸೇವೆಯ ಮೂಲಕ ಸಮಾಜಶಕ್ತಿಯನ್ನು ಬಲಪಡಿಸುವ ಉದ್ದೇಶದಿಂದ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತ್ ಜೋಡೋ ಟ್ರೋಫಿ–2026 ಆಯೋಜಿಸಲಾಗಿದೆ ಎಂದು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಬೋಧ್ ಚಂದ್ರ ಹೆಜಮಾಡಿ ತಿಳಿಸಿದ್ದಾರೆ.

ಅವರು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 2ರಂದು ಸಂಜೆ 4 ಗಂಟೆಗೆ ಕಾಪುವಿನ ರಾಜೀವ್ ಭವನದಿಂದ ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದವರೆಗೆ “ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ–ಬೃಹತ್ ಭಾರತ್ ಜೋಡೋ ರ‍್ಯಾಲಿ” ನಡೆಯಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಯುವಜನರಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಸಂದೇಶ ಸಾರುವುದು ರ‍್ಯಾಲಿಯ ಉದ್ದೇಶವಾಗಿದೆ.

19 ಕ್ರಿಕೆಟ್, 15 ಮಹಿಳಾ ಥ್ರೋಬಾಲ್ ತಂಡಗಳ ಭಾಗಿ

ಅಕ್ಟೋಬರ್ 3 ಮತ್ತು 4ರಂದು ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾರತ್ ಜೋಡೋ ಟ್ರೋಫಿ–2026 ಪಂದ್ಯಾವಳಿ ನಡೆಯಲಿದೆ. ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವ್ಯಾಪ್ತಿಯ ವಿವಿಧ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ 19 ಕ್ರಿಕೆಟ್ ತಂಡಗಳು ಹಾಗೂ 15 ಮಹಿಳಾ ಥ್ರೋಬಾಲ್ ತಂಡಗಳು ಭಾಗವಹಿಸಲಿವೆ.
ಅಕ್ಟೋಬರ್ 3ರಂದು ನಡೆಯಲಿರುವ ಪಂದ್ಯಾವಳಿಯನ್ನು ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ. ಕ್ರೀಡೆಯ ಮೂಲಕ ಪಕ್ಷದ ಕಾರ್ಯಕರ್ತರು, ಯುವಕರು ಹಾಗೂ ಮಹಿಳಾ ಕಾರ್ಯಕರ್ತರ ನಡುವೆ ಸ್ನೇಹ, ಒಗ್ಗಟ್ಟು ಮತ್ತು ಸಂಘಟನಾ ಬಾಂಧವ್ಯವನ್ನು ಬಲಪಡಿಸುವ ಉದ್ದೇಶವನ್ನು ಕಾರ್ಯಕ್ರಮ ಹೊಂದಿದೆ ಎಂದು ಪ್ರಬೋಧ್ ಚಂದ್ರ ಹೆಜಮಾಡಿ ತಿಳಿಸಿದರು.

ಕ್ರಿಕೆಟ್ ಬಹುಮಾನ

ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ₹55,555 ನಗದು ಬಹುಮಾನ ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹33,333 ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು.

ಇದರೊಂದಿಗೆ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ, ಶ್ರೇಷ್ಠ ಬೌಲರ್ ಹಾಗೂ ಶ್ರೇಷ್ಠ ಬ್ಯಾಟರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.

ಥ್ರೋಬಾಲ್ ಬಹುಮಾನ

ಮಹಿಳಾ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹22,222 ನಗದು ಬಹುಮಾನ ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ₹11,111 ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು.

ಅತ್ಯುತ್ತಮ ಎಸೆತಗಾರ್ತಿ, ಅತ್ಯುತ್ತಮ ಹಿಡಿತಗಾರ್ತಿ ಹಾಗೂ ಶ್ರೇಷ್ಠ ಸರ್ವಾಂಗೀಣ ಆಟಗಾರ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಕಿಶೋರ್ ಆಳ್ವ, ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವೈ. ಸುಕುಮಾರ್, ಪ್ರಬೋಧ್ ಚಂದ್ರ ಹೆಜಮಾಡಿ, ಅಬ್ದುಲ್ ಅಜೀಜ್ ಹೆಜಮಾಡಿ, ಸುಧೀರ್ ಕರ್ಕೇರ, ದೀಕ್ಷಾ ಕೆ. ಹಾಗೂ ವಿಶಾಲ್ ವಿ. ಬಂಗೇರ ಉಪಸ್ಥಿತರಿದ್ದರು.