ಬಾಳ್ತಿಲದ ಸನ್ನಿಧಿ ಎಲ್.ಎಸ್. ಕಶೆಕೋಡಿ ಅವರಿಗೆ ಪ್ರತಿಷ್ಠಿತ ‘ಕರಾವಳಿ ಬಾಲ ಪ್ರತಿಭೆ ಪ್ರಶಸ್ತಿ’

0
5

ಬಂಟ್ವಾಳ : ಬಹುಭಾಷಾ ಜಾಗೃತಿ ಅಭಿಯಾನಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಬಾಳ್ತಿಲದ ಪ್ರತಿಭಾನ್ವಿತ ಬಾಲಕಿ ಸನ್ನಿಧಿ ಎಲ್.ಎಸ್. ಕಶೆಕೋಡಿ ಅವರು ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಇದರ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ‘ಕರಾವಳಿ ಬಾಲ ಪ್ರತಿಭೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಸನ್ನಿಧಿ ಅವರ ವಿಶೇಷ ಸಾಧನೆಗಳು

ಬಹುಭಾಷಾ ಮತದಾನ ಜಾಗೃತಿ

ದೆಹಲಿ ಸೇರಿದಂತೆ ದೇಶದ 4 ರಾಜ್ಯಗಳಲ್ಲಿ 6 ವಿವಿಧ ಭಾಷೆಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ಮೂಲಕ ಸನ್ನಿಧಿ ಅವರು ರಾಷ್ಟ್ರದ ಗಮನ ಸೆಳೆದಿದ್ದಾರೆ.

ಸಾಮಾಜಿಕ ಕಳಕಳಿ

ಮತದಾನ ಜಾಗೃತಿಯ ಜೊತೆಗೆ ಸ್ವಚ್ಛತೆ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಕುರಿತು ನಿರಂತರವಾಗಿ ಅರಿವು ಮೂಡಿಸುತ್ತಿದ್ದಾರೆ.

ಮಾದಕ ವಸ್ತು ವಿರೋಧಿ ಅಭಿಯಾನ

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಇವರ ವಿಶೇಷತೆಯಾಗಿದೆ. 7 ನೇಯ ತರಗತಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ ಪೆರಾಜೆ ಮಾಣಿ ಬಂಟ್ವಾಳ ಇಲ್ಲಿಯ ವಿದ್ಯಾರ್ಥಿನಿಯಾಗಿರುತ್ತಾಳೆ

ಪ್ರಶಸ್ತಿ ಪ್ರದಾನ ಸಮಾರಂಭದ ವಿವರ

ಕಾಸರಗೋಡಿನ ಮಧೂರು ರಸ್ತೆಯ ಮೀಪುಗುರಿ, ಪಾರೆಕಟ್ಟೆ-ಕನ್ನಡ ಗ್ರಾಮ ರಸ್ತೆಯಲ್ಲಿರುವ ‘ಕಾಸರಗೋಡು ಕನ್ನಡ ಗ್ರಾಮ’ದಲ್ಲಿ ಇದೇ ನವೆಂಬರ್ 28 ಮತ್ತು 29ರಂದು ಎರಡು ದಿನಗಳ ಕಾಲ ‘ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026’, ‘ಕೇರಳ-ಕರ್ನಾಟಕ ಉತ್ಸವ’ ಹಾಗೂ ‘ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ’ ಆಯೋಜಿಸಲಾಗಿದೆ. ನವೆಂಬರ್ 29, ಭಾನುವಾರ ಅಪರಾಹ್ನ 3.00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸನ್ನಿಧಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಕಳೆದ 37 ವರ್ಷಗಳಿಂದ ಕೇರಳ ರಾಜ್ಯದ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು, ಸಮ್ಮೇಳನದ ಅಂಗವಾಗಿ ನವೆಂಬರ್ 28ರಂದು ಬೆಳಿಗ್ಗೆ 10.00 ಗಂಟೆಗೆ ‘ಕೇರಳ-ಕರ್ನಾಟಕ ಭವನ’ದ ಭೂಮಿಪೂಜೆ ಮತ್ತು ಶಿಲಾನ್ಯಾಸ ಸಮಾರಂಭವನ್ನೂ ಹಮ್ಮಿಕೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.