‘ಪ್ರಾಜೆಕ್ಟ್ ನನ್ನೀರ್’ : ಮೂರು ಜಲಮೂಲಗಳ ಅಭಿವೃದ್ಧಿ

0
24

ಮಂಗಳೂರು : ಜಲಮೂಲಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಎಂಎಂ ಪ್ರತಿಷ್ಠಾನ ತನ್ನ ‘ಪ್ರಾಜೆಕ್ಟ್ ನನ್ನೀರ್” ಯೋಜನೆಯ ಮೂಲಕ ಕರ್ನಾಟಕದ ಜಲಮೂಲಗಳನ್ನು ಪುನರುಜ್ಜೀವನ ಮಾಡಿದೆ,ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ ಮೂರು ಪ್ರಮುಖ ಜಲಮೂಲಗಳಾದ ತೇರಗಾಂವ ಗ್ರಾಮದ ಕುಂಬಾರಕೆರೆ, ಅಲ್ಲೋಳಿ ಹೊಂಡ ಮತ್ತು ಹನುಮಂತ ಹೊಂಡವನ್ನು ಅಭಿವೃದ್ಧಿಪಡಿಸಿ ಜಲ ಭದ್ರತೆಗೆ ಬಲ ತಂದುಕೊಟ್ಟಿದೆ ಹಾಗೂ ಸ್ಥಳೀಯ ಸಮುದಾಯಗಳಿಗೆ ಸುಸ್ಥಿರವಾದ ಜೀವನೋಪಾಯಕ್ಕೆ ನೆರವು ಒದಗಿಸಿದೆ ಎಂದು ಇ.ಐ.ಡಿ. ಪಾರಿ ಇಂಡಿಯಾ ಲಿಮಿಟೆಡ್ ಕಂಪನಿಯ ಸಿಇಒ ಹಾಗೂ ಪ್ರಾಜೆಕ್ಟ್ ನನ್ನೀರ್‍ನ ಅಧ್ಯಕ್ಷ ಮುತ್ತು ಮುರುಗಪ್ಪನ್ ಹೇಳಿದ್ದಾರೆ.

ನೈಋತ್ಯ ಮುಂಗಾರಿನ ಅವಧಿಯಲ್ಲಿ ವಾರ್ಷಿಕ 1,500 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿದರೂ ಹಳಿಯಾಳ ತಾಲ್ಲೂಕು ಆ ನೀರನ್ನು ಉಳಿಸಿಕೊಳ್ಳುವಲ್ಲಿ ಸವಾಲು ಎದುರಿಸುತ್ತಿದೆ. ಸುರಿದ ನೀರು ಅಂತರ್ಜಲ ಸೇರುವಂತೆ ಮಾಡುವಲ್ಲಿನ ಸೀಮಿತ ಸಾಮಥ್ರ್ಯ, ಸುರಿದ ನೀರು ಹರಿದುಹೋಗುವ ಕಾರಣಗಳಿಂದಾಗಿ ಹಳಿಯಾಳವು ಕಾಲಕಾಲಕ್ಕೆ ನೀರಿನ ಕೊರತೆ ಎದುರಿಸುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ರೂಪಿಸಲಾಗಿತ್ತು ಎಂದು ವಿವರಿಸಿದ್ದಾರೆ.

ಕುಂಬಾರಕೆರೆ ತೇರಗಾಂವ ಗ್ರಾಮದ ಪಾಲಿಗೆ ಅಂತರ್ಜಲ ಮರುಪೂರಣದ ಮಹತ್ವದ ಮೂಲವಾಗಿದ್ದು, 54.5 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಪುನರುಜ್ಜೀವನ ಪ್ರಯತ್ನದ ಫಲವಾಗಿ ಈ ಕೆರೆಯ ನೀರು ಸಂಗ್ರಹಣಾ ಸಾಮಥ್ರ್ಯವು 352,002 ಘನ ಮೀಟರ್‍ಗಳಷ್ಟು ಇದ್ದಿದ್ದು 655,452 ಘನ ಮೀಟರ್‍ಗಳಿಗೆ ಹೆಚ್ಚಳ ಕಂಡಿದೆ. ಇದರಿಂದಾಗಿ ಅಂದಾಜು 243 ಕುಟುಂಬಗಳಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದ್ದಾರೆ.

ಅಲ್ಲೋಳಿ ಹೊಂಡ ಹಾಗೂ ಹನುಮಂತ ಹೊಂಡಗಳಲ್ಲಿ ಕೂಡ ಪರಿವರ್ತನೆ ತಂದಿದೆ. ಈ ಹೊಂಡಗಳ ನೀರಿನ ಸಂಗ್ರಹ ಸಾಮಥ್ರ್ಯವು ಕ್ರಮವಾಗಿ 27,280 ಘನ ಮೀಟರ್‍ಗಳಷ್ಟು ಇದ್ದಿದ್ದು 87,296 ಘನ ಮೀಟರ್‍ಗಳಿಗೆ ಹಾಗೂ 10,115 ಘನ ಮೀಟರ್‍ಗಳಷ್ಟು ಇದ್ದಿದ್ದು 24,276 ಘನ ಮೀಟರ್‍ಗಳಿಗೆ ಹೆಚ್ಚಾಗಿದೆ. ಒಟ್ಟಾರೆಯಾಗಿ ಈ ಕ್ರಮಗಳಿಂದಾಗಿ ಕೃಷಿ ಉದ್ದೇಶಗಳು ಹಾಗೂ ನಿತ್ಯದ ಅಗತ್ಯಗಳಿಗೆ ನೀರಿನ ಲಭ್ಯತೆ ಸುಧಾರಣೆ ಕಂಡು, 370ಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲ ಆಗಲಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರೂ ರೈತರೂ ಆಗಿರುವ ಪಿಶುನಾಥ ದೇವೇಂದ್ರ ಮಿರಶಿ ಹಾಗೂ ನಾಗಪ್ಪ ಶಾಂತಪ್ಪ ಕಕ್ಕೇರಿ ಕೃತಜ್ಞತೆ ಸಲ್ಲಿಸಿದ್ದಾರೆ.