ಮೂಡುಬಿದಿರೆ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ, ವಾರದ ಸಂತೆ ವೇಳೆ ಉಂಟಾಗುವ ಟ್ರಾಫಿಕ್ ಸಮಸ್ಯೆ ಹಾಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯ ಕೊರತೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಸೋಮವಾರ ಸಂಜೆ ಸಮಾಜ ಮಂದಿರದಲ್ಲಿ ಮೂಡುಬಿದಿರೆಯ ನಾಗರಿಕರ ಸಭೆ ನಡೆಯಿತು. ಸಭೆಯಲ್ಲಿ ಪಟ್ಟಣದ ಪ್ರಮುಖ ಸಂಚಾರ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ನಾಗರಿಕ ರಾಜೇಂದ್ರ ಪೈ, ಶುಕ್ರವಾರ ನಡೆಯುವ ವಾರದ ಸಂತೆಯ ಸಂದರ್ಭದಲ್ಲಿ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ವ್ಯಾಪಾರ ನಡೆಸುವುದರಿಂದ ಗ್ರಾಹಕರು ರಸ್ತೆಯಲ್ಲೇ ವಾಹನ ನಿಲ್ಲಿಸಿ ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ವಾಹನ ದಟ್ಟಣೆ ಉಂಟಾಗಿ, ಸಮಯಕ್ಕೆ ಬರುವ ಬಸ್‌ಗಳು ಬಸ್ ನಿಲ್ದಾಣ ಪ್ರವೇಶಿಸಲು ಸಾಧ್ಯವಾಗದೆ ಮುಖ್ಯ ರಸ್ತೆಯಲ್ಲೇ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ತೆರಳಬೇಕಾಗುತ್ತಿದೆ ಎಂದು ಆರೋಪಿಸಿದರು.
ಖಾಸಗಿ ಬಸ್‌ಗಳು ನಿಗದಿತ ಸ್ಥಳಗಳ ಹೊರತಾಗಿ ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಭೆಯಲ್ಲಿ ಮಾತನಾಡಿದ ವ್ಯಾಪಾರಸ್ಥರ ಪ್ರತಿನಿಧಿ ಪ್ರದೀಪ್, ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳು, ಕಾರುಗಳು ಹಾಗೂ ಆಟೋಗಳನ್ನು ದಿನವಿಡೀ ಪಾರ್ಕ್ ಮಾಡುವುದರಿಂದ ಬಸ್‌ಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹಲವು ಬಾರಿ ಪುರಸಭೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಿನವಿಡೀ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಂಡು, ಅಗತ್ಯವಿದ್ದರೆ ವಾಹನಗಳಿಗೆ ಲಾಕ್ ಹಾಕುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಯಾವುದೇ ವಾಹನಗಳಿಗೆ ಪಾರ್ಕಿಂಗ್ ಅವಕಾಶ ನೀಡಬಾರದು. ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿ ಸಂಕೀರ್ಣದ ಹಿಂಭಾಗದ ಪಾರ್ಕಿಂಗ್ ಸ್ಥಳವನ್ನು ಬಳಸಬೇಕು ಎಂದು ಯಶೋಧರ ಸಲಹೆ ನೀಡಿದರು.
ನವಮಿ, ಪ್ರೆಸ್ಟೀಜ್ ಟವರ್ ಹಾಗೂ ಅಗರಿ ಅಂಗಡಿಗಳ ಮುಂಭಾಗ ಪಾರ್ಕಿಂಗ್‌ಗೆ ಮೀಸಲಾದ ಜಾಗದಲ್ಲಿ ವ್ಯಾಪಾರ ನಡೆಸುತ್ತಿರುವ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು.
ಬಸ್‌ಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಸಂಬಂಧಿತ ಬಸ್ ಮಾಲೀಕರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೆನರಾ ಬಸ್ ಮಾಲಕರ ಸಂಘದ ಮೂಡುಬಿದಿರೆ ಅಧ್ಯಕ್ಷ ನಾರಾಯಣ ಪಿ.ಎಂ. ಭರವಸೆ ನೀಡಿದರು.
ಇನ್ನೊಂದೆಡೆ, ಪಟ್ಟಣದ ಮುಖ್ಯ ರಸ್ತೆಯಲ್ಲಿ ಭಾರೀ ವಾಹನಗಳು ಸಂಚರಿಸುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದೆ. ಆದ್ದರಿಂದ ಭಾರೀ ವಾಹನಗಳನ್ನು ವಿದ್ಯಾಗಿರಿಯಿಂದ ಮಾಸ್ತಿಕಟ್ಟೆ ಬೈಪಾಸ್ ರಸ್ತೆಯ ಮೂಲಕ ಸಂಚರಿಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ಬಸ್ ಮಾಲಕ ಶಶಿ ಅಮೀನ್ ಸಲಹೆ ನೀಡಿದರು.
ಸಭೆಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್, ತಹಶೀಲ್ದಾರ್, ಪುರಸಭೆಯ ಮುಖ್ಯಾಧಿಕಾರಿ ಹಾಗೂ ಪೊಲೀಸ್ ನಿರೀಕ್ಷಕರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ನಾಗರಿಕರಾದ ಅಮರ್ ಕೋಟೆ, ಮನೋಜ್ ಮಾರ್ಲ, ಬಸ್ ಮಾಲಕರಾದ ಪ್ರಕಾಶ್ ಸಪಲಿಗ, ಸುರೇಂದ್ರ, ಕೌಸ್ತುಭ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಏಜೆಂಟರಾದ ಸಂತೋಷ್ ಶೆಟ್ಟಿ, ಸತೀಶ್ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

