ಬೈಕಂಪಾಡಿ ಮೀನಾಕಳಿಯದಿಂದ ಎನ್‌ಎಚ್ 66ಕ್ಕೆ ಸಂಪರ್ಕಿಸುವ ಶಾರ್ಟ್‌ಕಟ್ ರಸ್ತೆ ಬಂದ್ ಮಾಡುವ ಪ್ರಸ್ತಾವನೆಗೆ ಸಾರ್ವಜನಿಕ ಆಕ್ರೋಶ

0
14

ಬೈಕಂಪಾಡಿ ಮೀನಾಕಳಿಯದಿಂದ ರಾಷ್ಟ್ರೀಯ ಹೆದ್ದಾರಿ 66 (NH 66) ಕಡೆಗೆ ಸಂಪರ್ಕಿಸುವ ಶಾರ್ಟ್‌ಕಟ್ ರಸ್ತೆಯನ್ನು ಬಂದ್ ಮಾಡುವ ಪ್ರಸ್ತಾವನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ದೀಪಕ್ ಪೆಟ್ರೋಲ್ ಬಂಕ್ ಬಸ್‌ಸ್ಟಾಪ್ ಕಡೆಗೆ ಹೋಗುವ ಈ ಮಾರ್ಗವನ್ನು ಕಳೆದ ಸುಮಾರು 50 ವರ್ಷಗಳಿಂದ ಕೈಗಾರಿಕಾ ಪ್ರದೇಶದ ಕಾರ್ಮಿಕರು, ಮೀನುಗಾರ್ತಿಯರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ನಿತ್ಯ ಉಪಯೋಗಿಸುತ್ತಿದ್ದಾರೆ.

ಈಗ New Mangalore Port Authority (ಎನ್‌ಎಂಪಿಎ) ಈ ದಾರಿಯನ್ನು ಸಂಪೂರ್ಣವಾಗಿ ಕಂಬೌಂಡ್ ಗೋಡೆ ನಿರ್ಮಿಸಿ ಮುಚ್ಚುವ ಯೋಜನೆ ಹೊಂದಿದೆ ಎನ್ನಲಾಗಿದೆ. ಕನಿಷ್ಠ ಪಾದಚಾರಿಗಳಿಗೆ ಸಣ್ಣ ದಾರಿ (ಫುಟ್‌ಪಾತ್) ಬಿಡದೇ ಮುಚ್ಚಲು ಮುಂದಾಗಿರುವುದು ಸಾರ್ವಜನಿಕರಿಗೆ ಭಾರೀ ತೊಂದರೆಯನ್ನು ಉಂಟುಮಾಡಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರು ದಿನನಿತ್ಯ ಈ ದಾರಿಯನ್ನೇ ಅವಲಂಬಿಸಿಕೊಂಡಿದ್ದಾರೆ. ಪರ್ಯಾಯ ಮಾರ್ಗ ಬಳಸಬೇಕಾದರೆ ಹೆಚ್ಚಿನ ಅಂತರ ನಡೆಯಬೇಕಾಗುತ್ತದೆ. ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವೃದ್ಧರಿಗೆ ವಿಶೇಷವಾಗಿ ಕಷ್ಟವಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

“ಕನಿಷ್ಠ ಪಾದಚಾರಿಗಳಿಗೆ ಒಂದು ಸಣ್ಣ ದಾರಿಯನ್ನು ಬಿಡಬೇಕು. ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ತೀರ್ಮಾನ ಕೈಗೊಳ್ಳಬೇಕು” ಎಂದು ಸ್ಥಳೀಯರು ವಿನಂತಿಸಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜನರ ಹಿತಾಸಕ್ತಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here