ಬೆಂಗಳೂರು : ನಗರದ ಯಲಹಂಕದಲ್ಲಿ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪಿಯುಸಿ ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ವರದಿಯಾಗಿದೆ
ಮೃತನನ್ನು ಜಾರ್ಖಂಡ್ ಮೂಲದ 21 ವರ್ಷದ ಮಿಶ್ರಾ ಎಂದು ಗುರುತಿಸಲಾಗಿದೆ.
ಈತ ಯಲಹಂಕದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ನಸುಕಿನ ಜಾವ ಸುಮಾರು 3 ಗಂಟೆಯ ವೇಳೆಗೆ ಮಿಶ್ರಾ ತಾನು ವಾಸವಿದ್ದ ಕಟ್ಟಡದ ಮೇಲಿನಿಂದ ಕೆಳಕ್ಕೆ ಜಿಗಿದಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರವಾದ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ವಿದ್ಯಾರ್ಥಿಯು ಓದಿನ ಒತ್ತಡ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಈ ಹಂತಕ್ಕೆ ಮುಂದಾಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವಿದ್ಯಾರ್ಥಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

