ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ ಬೆಂದ್ರ್ ತೀರ್ಥ ಕ್ಷೇತ್ರದ ಬಗ್ಗೆ ತಿಳಿದುಕೊಂಡಿದ್ದಿರಾ?
ಪುತ್ತೂರು: ಇರ್ದೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ದಿಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ ಬೆಂದ್ರ್ ತೀರ್ಥ ಪುಣ್ಯಕ್ಷೇತ್ರದಲ್ಲಿ ಆ. 23ರಂದು ತೀರ್ಥ ಅಮವಾಸ್ಯೆ ಪ್ರಯುಕ್ತ ಪುಣ್ಯ ತೀರ್ಥ ಸ್ನಾನ ನಡೆಯಲಿದೆ.
ಬಿಸಿನೀರಿನ ಚೆಲುಮೆ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೈಸರ್ಗಿಕವಾಗಿ ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಪುಟ್ಟ ಗ್ರಾಮ ಇರ್ದೆಯಲ್ಲಿ ಇದೊಂದು ಪ್ರಕೃತಿ ಸಹಜವಾದ ಬಿಸಿನೀರಿನ ಚೆಲುಮೆಯಾಗಿದೆ. ಇದರಲ್ಲಿ ಚಿಮ್ಮುವ ಬಿಸಿನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಕೆಲವು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವಾಗಿದೆ ಅನ್ನುವ ನಂಬಿಕೆ ಇಲ್ಲಿಯದ್ದು. ಅಲ್ಲದೆ ಧಾರ್ಮಿಕವಾಗಿಯೂ ಈ ತೀರ್ಥ ಮಹತ್ವ ಪಡೆದಿದ್ದು, ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ನಿಕಟ ನಂಟು ಇರುವುದರಿಂದ ಹಿಂದುಗಳ ಪಾಲಿಗೆ ಇದೊಂದು ಅತ್ಯಂತ ಪುಣ್ಯ ಶ್ರದ್ಧಾಕೇಂದ್ರವೇ ಆಗಿದೆ.
ಹೊಸದಾಗಿ ದಾಂಪತ್ಯಕ್ಕೆ ಕಾಲಿಟ್ಟವರು ಇಲ್ಲಿಗೆ ಭೇಟಿ ನೀಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಕ್ಷೇತ್ರದ ಈ ಬಿಸಿನೀರಿನ ತೀರ್ಥ ಜಲವು ದಕ್ಷಿಣ ಭಾರತದ ಒಂದು ವಿಸ್ಮಯ ಎಂದೇ ಹೇಳಬಹುದು. ಇದರ ಕುರಿತು ಅಧ್ಯಯನ ನಡೆಸಿರುವ ಭಾರತೀಯ ಪುರಾತತ್ವ ಸಂಸ್ಥೆಯು ಇದು ದಕ್ಷಿಣ ಭಾರತದಲ್ಲಿರುವ ಏಕೈಕ ನೈಸರ್ಗಿಕ ಬಿಸಿನೀರಿನ ಚೆಲುಮೆ ಎಂದು ಕರೆಯಲ್ಪಟ್ಟಿದೆ. ಪ್ರತಿವರ್ಷ ತೀರ್ಥ ಅಮಾವಾಸೆ ದಿನ ಅಂದರೆ ಈ ಬಾರಿ ಆ. 23ರಂದು ಶನಿವಾರ ಪುಣ್ಯ ತೀರ್ಥಸ್ನಾನ ನಡೆಯಲಿದೆ.