ಬೆಂಗಳೂರು; ವಿಶ್ವಕರ್ಮ ಸಮುದಾಯದ ಮಹಿಳೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಮೈಸೂರಿನ ಗಂಗೋತ್ರಿ ಬಡಾವಣೆಯ ನಿವಾಸಿ ರಂಗಪ್ಪ.ಆರ್ ಬಿನ್ ರಾಮಾಚಾರಿ ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಅಖಿಲ ಕರ್ನಾಟಕ ವಿಶ್ವಕರ್ಮ ಸಂಘಟನೆಯ ಬೆಂಗಳೂರು ಘಟಕದ ಅಧ್ಯಕ್ಷೆ ವಸಂತ ಮುರಳಿ ವಿರುದ್ಧ ರಂಗಪ್ಪ ಎಂಬುವರು ಅಸಂಸದೀಯವಾಗಿ ಟೀಕೆ ಮಾಡಿದ್ದರು. ಈ ಬಗ್ಗೆ ನೀಡಿದ ದೂರು ಆಧಾರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವಕರ್ಮ ಸಮುದಾಯದ ಮುಖಂಡ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಅವರನ್ನು ಈ ಹಿಂದೆಯೂ ಸಹ ಸಮಾಜದ 25ಕ್ಕೂ ಹೆಚ್ಚು ಮುಖಂಡರುಗಳ ಎದುರಲ್ಲೇ ರಂಗಪ್ಪ ಹಗುರವಾಗಿ ಮಾತನಾಡಿ ಕ್ಷಮೆ ಕೇಳಿದ್ದರು.
ಕ್ಷಮಾಪಣಾ ಪತ್ರವನ್ನು ಕೂಡ ಬರೆದು ಕೊಟ್ಟಿದ್ದರು. ಮತ್ತೆ ತನ್ನ ವರ್ತನೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿರಲಿಲ್ಲ. ಇದೀಗ ರಂಗಪ್ಪ ಆರ್ ಅವರ ಮೇಲೆ ಎಫ್ಐಆರ್ ದಾಖಲಾಗಿದ್ದು, ಇದೀಗ ಪೀಣ್ಯ ಪೊಲೀಸ್ ರಾಣೆಯ ಪೊಲೀಸರು ರಂಗಪ್ಪ ಅವರನ್ನು ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆ.ಪಿ. ನಂಜುಂಡಿ, ವಿಶ್ವಕರ್ಮ `ಕರ್ಮ’ವನ್ನು ತೊಡೆದು ಹಾಕಿ ಸನ್ಮಾರ್ಗದಿಂದ ನಡೆಯುವಂತೆ ಜನರಲ್ಲಿ ಮಾರ್ಗದರ್ಶನ ನೀಡುತ್ತದೆ. ವಿಶ್ವಕರ್ಮ ಸಮುದಾಯ ತಮ್ಮದೇ ಆದ ಕೊಡುಗೆ ನೀಡುತ್ತಲೇ ಬರುತ್ತಿದೆ. ವಿಶ್ವಕರ್ಮ ಸಮುದಾಯ ಪ್ರತಿಯೊಂದು ಕಸುಬಿನ ಮೂಲ. ಕ್ರಿಯಾಶೀಲತೆ, ಸೃಜನಶೀಲತೆಗೆ ಮತ್ತೊಂದು ಹೆಸರೇ ವಿಶ್ವಕರ್ಮ ಸಮುದಾಯ. ವಿಶ್ವಕರ್ಮರು ಈ ನಾಡಿನ ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆ ಅಪಾರ. ಇಂಥ ಸಮುದಾಯವನ್ನು ಗೌರವಿಸುವ ಮತ್ತು ಆರಾಧಿಸುವ ಬದಲು ಈತ ವಿಶ್ವಕರ್ಮ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಸಂತ ಮುರಳಿ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ, ಹಿಂಸಾಚಾರ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದಾಳೆ. ತನಗೆ ಮತ್ತು ತನ್ನ ಸುತ್ತ-ಮುತ್ತಲಿರುವ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿರುವ ಬಗ್ಗೆ ಹೆಮ್ಮೆ ಇದೆ. ಸ್ವಾಭಿಮಾನಕ್ಕೆ ಧಕ್ಕೆ ಆಗದಂತೆ ಸಾರ್ವಜನಿಕ ಬದುಕಿನಲ್ಲಿ ಮಾದರಿಯಾಗಿದ್ದಾಳೆ. ಹಲವು ವರ್ಷಗಳಿಂದ ವಸಂತ ಮುರಳಿ ಅವರು ವಿಶ್ವಕರ್ಮ ಸಮುದಾಯಕ್ಕೆ ಮತ್ತು ಸಂಘಟನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಕೆ.ಪಿ. ನಂಜುಂಡಿ ಹೇಳಿದರು.