ಬಂಟ್ವಾಳ:ಪ್ರತೀ ವಿದ್ಯಾರ್ಥಿಗೆ ಹುಟ್ಟಿನಿಂದ ಶಿಕ್ಷಣ ಮುಗಿಯುವ ತನಕ ಸರ್ಕಾರವು ತಲಾ ರೂ ೧ ಲಕ್ಷ ಮೊತ್ತ ವಿನಿಯೋಗಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಆಧುನಿಕತೆಗೆ ತಕ್ಕಂತೆ ಪ್ರತಿಭಾನ್ವಿತ ಶಿಕ್ಷಕರಿಂದ ಗುಣಮಟ್ಟದ ದ್ವಿಭಾಷಾ ಶಿಕ್ಷಣವೂ ಸಿಗುತ್ತಿದೆ ಎಂದು ರಾಷ್ಟçಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಕೆ.ರಮೇಶ ನಾಯಕ್ ಹೇಳಿದ್ದಾರೆ.
ಇಲ್ಲಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.
ಆರಂಭದಲ್ಲಿ ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಇದೇ ವೇಳೆ ದಾನಿಗಳು ನೀಡಿದ ಉಚಿತ ಪುಸ್ತಕ, ಕೊಡೆ ಮತ್ತಿತರ ಕಲಿಕಾ ಸಾಮಾಗ್ರಿ ವಿತರಿಸಲಾಯಿತು. ಮುಖ್ಯಶಿಕ್ಷಕಿ ಜಾನೆಟ್ ಕಾನ್ಸೆಸೊ ಇವರ ವತಿಯಿಂದ ಹೊಸ ವಿದ್ಯಾರ್ಥಿಗಳಿಗೆ ತಲಾ ರೂ ೧ ಸಾವಿರದಂತೆ ಠೇವಣಿ ಪತ್ರ ವಿತರಿಸಿದರು.
ಪಶು ವೈದ್ಯಾಧಿಕಾರಿ ಡಾ.ಉಮೇಶ್ ಕಿರಣ್, ಸಿ ಆರ್ ಪಿ ಪ್ರೇಮಲತಾ ಶುಭ ಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ವಸಂತ ಗೌಡ ಮುದ್ದಾಜೆ, ರೋಟರಿ ಕ್ಲಬ್ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ, ಶಿಕ್ಷಕಿಯರಾದ ಬೇಬಿ, ತನುಜಾ, ನಿಖಿತಾ ಮತ್ತಿತರರು ಇದ್ದರು.
ಮುಖ್ಯಶಿಕ್ಷಕಿ ಜಾನೆಟ್ ಕಾನ್ಸೆಸೊ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಿದ್ಧಪ್ಪ ಕಡೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

