ಕಾರ್ಕಳ: ಕೈಕೇಯಿಯ ಮನಸ್ಸನ್ನು ಕೆಡಿಸಿದ ಮಂಥರೆಯಿAದಾಗಿ ರಾಮಾಯಣದ ಕಥೆಯು ಹೊಸ ಸ್ವರೂಪವನ್ನು ಪಡೆದುಕೊಂಡಿತು. ಚಂಪೂ ರಾಮಾಯಣದ ವರ್ಣನೆಯ ಉಲ್ಲೇಖದನ್ವಯ ಮಂಥರೆ ಮತ್ತು ಕೈಕೇಯಿ ತಮ್ಮ ಸ್ವಾರ್ಥಲಾಲಸೆಯಿಂದಾಗಿ ಅಯೋಧ್ಯೆಗೆ ಕೇಡನ್ನು ಬಯಸಿದರೂ ಪರೋಕ್ಷವಾಗಿ ಇದರಿಂದ ದುರ್ಜನರ ಸಂಹಾರ ಮತ್ತು ಸಜ್ಜನರ ಸಂರಕ್ಷಣೆಯಾಗಿ ರಾಮರಾಜ್ಯ ಸ್ಥಾಪನೆಯಾಗುವಂತಾಯಿತು ಎಂಬುದಾಗಿ ಪ್ರಸಿದ್ಧ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರಿಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಮಾಲೆಯ ಆರನೇ ಸೋಪಾನ ‘ವನಗಮನ ವತ್ತಾಂತ’ ಎಂಬ ವಿಷಯದ ಕುರಿತು ಜೂನ್ 21ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.
ರಾಮನಿಗೆ ಬದಲಾಗಿ ಭರತನಿಗೆ ಪಟ್ಟಾಭಿಷೇಕವಾಗಬೇಕೆಂಬ ಕೈಕೇಯಿಯ ನಿರ್ಧಾರವನ್ನು ತಿಳಿದ ದಶರಥ ಆಘಾತಕ್ಕೊಳಗಾಗುತ್ತಾನೆ. ಆದರೆ ಸ್ಥಿತಪ್ರಜ್ಞನಾದ ಪುರುಷೋತ್ತಮ ರಾಮನು ಯಾರ ಬಗ್ಗೆಯೂ ಒಂದಿನಿತೂ ಕೆಡುಕಿನ ಮಾತುಗಳನ್ನಾಡದೆ ಎಲ್ಲರನ್ನೂ ಒಪ್ಪಿಸಿ ಕಾಡಿಗೆ ತೆರಳಲು ಸಿದ್ಧನಾಗುತ್ತಾನೆ ಎನ್ನುತ್ತಾ ಈ ಹಿನ್ನೆಲೆಯ ಎಲ್ಲಾ ಪ್ರಸಂಗಗಳನ್ನೂ ಮನೋಜ್ಞವಾಗಿ ವಿವರಿಸಿದರು.
ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಡಾ.ನಾ.ಮೊಗಸಾಲೆ, ಅ.ಭಾ.ಸಾ.ಪ ಕಾರ್ಕಳ ತಾಲೂಕು ಸಮಿತಿಯ ಗೌರವಾಧ್ಯಕ್ಷರಾದ ನಿತ್ಯಾನಂದ ಪೈ, ಅಧ್ಯಕ್ಷರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾಕರ ಶ್ಯಾನುಭಾಗ್ ಪ್ರಾರ್ಥಿಸಿದರು. ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಜಯಶ್ರೀ ಆದಿರಾಜ ಅಜ್ರಿ ಸ್ವಾಗತಿಸಿ ಸದಾನಂದ ನಾರಾವಿ ವಂದಿಸಿದರು.