ರಾಜ್ಯ ಸರ್ಕಾರದ ಭದ್ರತಾ ವೈಫಲ್ಯವನ್ನು ಸಮರ್ಥಿಸುವ ರಮೇಶ್ ಕಾಂಚನ್ ಹೇಳಿಕೆ ಅಪ್ರಬುದ್ಧ ವ್ಯಕ್ತಿತ್ವಕ್ಕೆ ಸಾಕ್ಷಿ : ಅಜಿತ್ ಕಪ್ಪೆಟ್ಟು

0
69

ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗೂ ಭದ್ರತಾ ವೈಫಲ್ಯವನ್ನು ದುರ್ಘಟನೆ ಎಂಬಂತೆ ಬಿಂಬಿಸಿ ರಾಜ್ಯ ಸರ್ಕಾರದ ಲೋಪವನ್ನು ಸಮರ್ಥಿಸಿಕೊಳ್ಳುವ ಮೂಲಕ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತಮ್ಮ ಸಂವೇದನಾ ರಹಿತ ಅಪ್ರಬುದ್ಧ ವ್ಯಕ್ತಿತ್ವಕ್ಕೆ ಸಾಕ್ಷಿ ನೀಡಿದ್ದಾರೆ ಎಂದು ಬಿಜೆಪಿ ಉಡುಪಿ ನಗರ ಎಸ್.ಸಿ. ಮೋರ್ಚಾ ಅಧ್ಯಕ್ಷ ಅಜಿತ್ ಕಪ್ಪೆಟ್ಟು ಹೇಳಿದ್ದಾರೆ.

ಘಟನೆಯ ಬಗ್ಗೆ ರಾಜ್ಯ ಸರಕಾರವನ್ನು ಉಚ್ಚ ನ್ಯಾಯಾಲಯವೇ ತರಾಟೆಗೆ ತೆಗೆದುಕೊಂಡಿದ್ದು, ಓರ್ವ ಶಾಸಕರ ನೆಲೆಯಲ್ಲಿ ಉಡುಪಿ ಶಾಸಕರು ಸರ್ಕಾರದ ಲೋಪವನ್ನು ಪ್ರಶ್ನಿಸಿ ನೀಡಿದ ಹೇಳಿಕೆಗೆ ತಮ್ಮ ಕೀಳು ಪ್ರಚಾರದ ಹಪಾಹಪಿಗಾಗಿ ರಮೇಶ್ ಕಾಂಚನ್ ಇಂತಹ ತಿಳಿಗೇಡಿ ಹೇಳಿಕೆ ನೀಡುತ್ತಿರುವುದು ಕಾಂಗ್ರೆಸ್
ಪಕ್ಷದ ಘನತೆಗೆ ತಕ್ಕುದಲ್ಲ.

ಕಳೆದ ಆವಧಿಯಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತನ್ನದೇ ಪಕ್ಷದ ಮಹಿಳಾ ಸದಸ್ಯೆಯ ಮೇಲೆ ಹಲ್ಲೆ ನಡೆಸಿ ಉತ್ತರ ಕುಮಾರನ ಪೌರುಷ ಮೆರೆದ ವ್ಯಕ್ತಿಯಿಂದ ಇದಕ್ಕಿಂತ ಹೆಚ್ಚಿನ ಹೇಳಿಕೆ ನಿರೀಕ್ಷೆ ಮಾಡುವುದು ತಪ್ಪು ಎಂದೆನಿಸುತ್ತಿದೆ. ಆಸ್ಕರ್ ಫೆರ್ನಾಂಡೀಸ್, ವಿನಯ ಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು ಮುಂತಾದ ನಾಯಕರು ತಮ್ಮ ಪ್ರಬುದ್ಧ ರಾಜಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ತಂದಿದ್ದ ಗೌರವ ಇದೀಗ ರಮೇಶ್ ಕಾಂಚನ್ ಅವರ ಇಂತಹ ಅಸಂಬದ್ಧ ಹೇಳಿಕೆಯಿಂದ ಮಣ್ಣು ಪಾಲಾಗುತ್ತಿದೆ.

ಮಹಾಕುಂಭ ಮೇಳದಲ್ಲಿ ಕೋಟ್ಯಾoತರ ಮಂದಿ ಭಾಗವಹಿಸುವ ಸಂದರ್ಭದಲ್ಲಿ ಉಂಟಾದ ಘಟನೆಯನ್ನು ಬಿಜೆಪಿ ಪಕ್ಷದ ವೈಫಲ್ಯ ಎಂದು ಹೇಳುವ ಕಾಂಗ್ರೆಸ್ ಪಕ್ಷದ ಮುಖಂಡನಿಗೆ ತನ್ನದೇ ಸರಕಾರದ ವೈಫಲ್ಯವನ್ನು ಒಪ್ಪಿಕೊಳ್ಳುವ ಪ್ರಬುದ್ಧತೆ ಇಲ್ಲದಿರುವುದು ದುರದೃಷ್ಟಕರ.

ಸ್ವತಃ ರಾಜ್ಯದ ಉಪ ಮುಖ್ಯಮಂತ್ರಿಗಳೇ ಘಟನೆಯ ಬಗ್ಗೆ ನೊಂದು ಕಣ್ಣೀರು ಹಾಕಿದ್ದರೂ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾತ್ರ ಚಿಲ್ಲರೆ ರಾಜಕೀಯ ತೆವಲಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಂತಹ ವ್ಯಕ್ತಿಗೆ ಕಾಂಗ್ರೆಸ್ ಪಕ್ಷ ಅನಿವಾರ್ಯ ಎಂಬಂತೆ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಹುದ್ದೆಯನ್ನು ನೀಡಿದ್ದರೂ ಸ್ವಯಂ ಕಾಂಗ್ರೆಸ್ ಪಕ್ಷಕ್ಕೆ ಶಾಪವಾಗಿ ಪರಿಣಮಿಸಿದ್ದಾರೆ ಎನ್ನುವುದು ವಾಸ್ತವ. ಇವರ ಈ ಬೇಜವಾಬ್ದಾರಿಯುತ ಹೇಳಿಕೆಯನ್ನು ಬಿಜೆಪಿ ಉಡುಪಿ ನಗರ ಎಸ್.ಸಿ. ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದು ಅಜಿತ್ ಕಪ್ಪೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here