ಪುಸ್ತಕ ಓದು ಜೀವನದ ಯಶಸ್ಸಿನ ಮೆಟ್ಟಿಲು : ಡಾ. ವಾಮನ್ ರಾವ್ ಬೇಕಲ್

0
5

ಮಂಗಳೂರು : ಪುಸ್ತಕ ಜ್ಞಾನವು ವ್ಯಕ್ತಿಯ ವಿಕಾಸಕ್ಕೆ ಪೂರಕವಾಗಿದ್ದು, ಯಶಸ್ವಿ ಜೀವನದ ಹಾದಿಯನ್ನು ತೋರಿಸುತ್ತದೆ. ಓದಿನಿಂದ ಮನಸ್ಸಿಗೆ ಸಂತೋಷ ಹಾಗೂ ಸಮಾಧಾನ ಸಿಗುವುದರ ಜೊತೆಗೆ ವಿಷಯದ ಅರಿವು ಮತ್ತು ಲೋಕಾನುಭವವೂ ಪ್ರಾಪ್ತವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಭವನ ಗ್ರಂಥಾಲಯದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಕರೆ ನೀಡಿದರು.

ವಾಚನ ವಾರಾಚರಣೆ ಅಂಗವಾಗಿ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಗರದ ಭಾಲಭವನ್ ವಿದ್ಯಾ ಕೇಂದ್ರದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗಾಗಿ ಅರ್ಧ ದಿನದ ಗ್ರಂಥಾಲಯ ಸಂದರ್ಶನ ಮತ್ತು “ವಿದ್ಯಾರ್ಥಿಗಳಿಗೆ ಪುಸ್ತಕಗಳೊಂದಿಗೆ ಸಂವಾದ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಭಾಲಭವನ್ ವಿದ್ಯಾ ಸಂಸ್ಥೆಯ ಎಜುಕೇಷನಲ್ ಅಡ್ವೈಸರ್ ಹಾಗೂ ಕನ್ನಡ ಭವನದ ನಿರ್ದೇಶಕರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಕನ್ನಡ ಭವನವು ತನ್ನ ಸಮರ್ಥ ನೇತೃತ್ವದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉದ್ದೀಪನಕ್ಕಾಗಿ ಶಕ್ತಿ ಮೀರಿ ದುಡಿಯುತ್ತಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡಿರುವ ಕಾರ್ಯಗಳು ಭರವಸೆ ಮೂಡಿಸುತ್ತಿವೆ” ಎಂದು ಹೇಳಿದರು.

ಹಿರಿಯ ಪತ್ರಕರ್ತ ಹಾಗೂ ಕನ್ನಡ ಭವನದ ಗೌರವಾಧ್ಯಕ್ಷರಾದ ಪ್ರದೀಪ್ ಬೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಭಜನಾ ಗುರು ಹಾಗೂ ಕಲಾವಿದ ಜಯಾನಂದ ಕುಮಾರ್ ಹೊಸದುರ್ಗ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಪತ್ರಕರ್ತ ಜಗನ್ನಾಥ್ ಶೆಟ್ಟಿ ವರದಿ ತಯಾರಿಕೆ ಕುರಿತಾಗಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿದರು.

ಕಾರ್ಯಕ್ರಮದಲ್ಲಿ ಭಾಲಭವನ್ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯಿನಿ ಲೀಲಾವತಿ ನಾಯರ್ ಹಾಗೂ ಅಧ್ಯಾಪಕಿ ದೀಪ್ತಿ ಅವರನ್ನು ಕನ್ನಡ ಭವನದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಗ್ರಂಥಾಲಯಕ್ಕೆ ₹1,000 ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ವಿದ್ಯಾರ್ಥಿಗಳ ಅನಿಸಿಕೆಗಳು, ಗಾಯನ, ಪಿ.ಎನ್. ಪನಿಕ್ಕರ್ ಅವರ ಕುರಿತು ಭಾಷಣ, ವಾಚನ ವಾರಾಚರಣೆಯ ಮಹತ್ವದ ಕುರಿತು ಚರ್ಚೆ ಹಾಗೂ ಸಂವಾದಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ಗ್ರಂಥಾಲಯ ಸಂಚಾಲಕಿ ಸಂದ್ಯಾರಾಣಿ ಟೀಚರ್ ಸ್ವಾಗತಿಸಿದರು. ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ಕಾರ್ಯಕ್ರಮ ನಿರೂಪಣೆ ನಡೆಸಿದರು. ಗಣೇಶ್ ಕೆ.ಸಿ.ಎನ್. ವಂದನಾರ್ಪಣೆ ಸಲ್ಲಿಸಿದರು.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಮತ್ತು ಪುಸ್ತಕಗಳ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

LEAVE A REPLY

Please enter your comment!
Please enter your name here