ಸಾಸ್ತಾನ ಟೋಲ್ ಗೇಟ್ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧನ ರಕ್ಷಣೆ

0
59

ಉಡುಪಿ : ಸಾಸ್ತಾನ ಟೋಲ್ ಗೇಟ್ ಬಳಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಅಪರಿಚಿತ ವೃದ್ಧರೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ, ಉಡುಪಿಯ ಬೆಳಕು ಆಶ್ರಮದಲ್ಲಿ ತುರ್ತು ಪುನರ್ವಸತಿ ಕಲ್ಪಿಸಿದ್ದಾರೆ.

ರಕ್ಷಿಸಲ್ಪಟ್ಟ ವೃದ್ಧರನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಅಂಚೆ ವ್ಯಾಪ್ತಿಯ ಜಂಜನಬೈಲ್ ತಾಂಡಾದ ನಿವಾಸಿ ಗೋವಿಂದ ಗಂಗಪ್ಪ ಲಮಾಣಿ ಎಂದು ಗುರುತಿಸಲಾಗಿದೆ.



ಈ ಕಾರ್ಯಾಚರಣೆಗೆ ಕೋಟ ಆರಕ್ಷಕ ಠಾಣೆಯ ಸಿಬ್ಬಂದಿ ಹಾಗೂ ಟೋಲ್ ಗೇಟ್ ಸಿಬ್ಬಂದಿಗಳಾದ ಯೋಗೀಶ್ ಕುಮಾರ್ ಮತ್ತು ಶಿವಪ್ಪ ಅವರು ಸಹಕರಿಸಿದ್ದಾರೆ.

ವೃದ್ಧರ ಗುರುತು ಪತ್ತೆಯಾದ ಬಳಿಕ ನಿತ್ಯಾನಂದ ಒಳಕಾಡು ಅವರು ಈ ವಿಷಯವನ್ನು ಹುಬ್ಬಳ್ಳಿ ಪೊಲೀಸರ ಗಮನಕ್ಕೆ ತಂದಿದ್ದರು. ತಕ್ಷಣ ಸ್ಪಂದಿಸಿದ ಹುಬ್ಬಳ್ಳಿ ಪೊಲೀಸರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ವೃದ್ಧರು ಮನೆಯಿಂದ ನಾಪತ್ತೆಯಾಗಿದ್ದು, ಮನೆಯವರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ವೃದ್ಧರ ಕುಟುಂಬದವರು ಉಡುಪಿಗೆ ಆಗಮಿಸಿದ ಬಳಿಕ ಅವರನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು.

ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರಿಗೆ ತುರ್ತು ನೆರವು ನೀಡಿ ಆಶ್ರಯ ಕಲ್ಪಿಸಿದ ಸಮಾಜಸೇವಕರ ಹಾಗೂ ಸಹಕರಿಸಿದ ಪೊಲೀಸ್ ಮತ್ತು ಟೋಲ್ ಗೇಟ್ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.