ಮುದ್ದೇಬಿಹಾಳಕ್ಕೆ ಹೊರಟಿದ್ದ ಬಾಲಕನ ರಕ್ಷಣೆ : ಉಡುಪಿ ‘ಅಕ್ಕಪಡೆ’ ಸಿಬ್ಬಂದಿ ಸಮಯಪ್ರಜ್ಞೆಗೆ ಶ್ಲಾಘನೆ

0
12

ಉಡುಪಿ: ಕಾಣೆಯಾಗಿದ್ದ ಎಂಟನೇ ತರಗತಿಯ ಬಾಲಕನೊಬ್ಬನನ್ನು ಜಿಲ್ಲಾ ‘ಅಕ್ಕಪಡೆ’ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ರಕ್ಷಿಸಿರುವ ಘಟನೆ ನಡೆದಿದೆ.

ಜೂಲೈ 19 ರಂದು ಉಡುಪಿ ಜಿಲ್ಲಾ ಕಂಟ್ರೋಲ್ ರೂಮ್‌ನಿಂದ ಅಕ್ಕಪಡೆಗೆ ತುರ್ತು ಕರೆ ಬಂದಿದ್ದು, 8 ನೇ ತರಗತಿಯ ವಿದ್ಯಾರ್ಥಿಯೊಬ್ಬ ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸಕ್ರಿಯರಾದ ಅಕ್ಕಪಡೆಯ ಸಿಬ್ಬಂದಿ ನಗರದಾದ್ಯಂತ ಹುಡುಕಾಟ ಆರಂಭಿಸಿದರು.

ಕಾರ್ಯಾಚರಣೆಯ ಭಾಗವಾಗಿ ಕೆಎಸ್ಆರ್‌ಟಿಸಿ ಬಸ್ ಸ್ಟ್ಯಾಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ, ಕಾಣೆಯಾಗಿದ್ದ ಬಾಲಕ ಮುದ್ದೇಬಿಹಾಳಕ್ಕೆ ತೆರಳಲು ಬಸ್ಸಿನಲ್ಲಿ ಕುಳಿತಿರುವುದು ಕಂಡುಬಂದಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಅಕ್ಕಪಡೆಯ ಸಿಬ್ಬಂದಿ, ಹೊರಡಲು ಸಿದ್ಧವಾಗಿದ್ದ ಬಸ್ಸನ್ನು ತಡೆದು ಬಾಲಕನನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಬಳಿಕ ಬಾಲಕನನ್ನು ಸುರಕ್ಷಿತವಾಗಿ ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.