
ಉಡುಪಿ : ಮಂಗಳೂರು ಮತ್ತು ಮಡಗಾಂವ್ (ಗೋವಾ) ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಇದೀಗ ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಹಾಗೂ ಮಂಗಳೂರು–ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸುವಂತೆ ಕೋರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು 2025ರ ನವೆಂಬರ್ 12ರಂದು, 2026ರ ಜೂನ್ 6ರಂದು ಹಾಗೂ 2026ರ ಆಗಸ್ಟ್ 10ರಂದು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಸಂಸದರ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವರು, ಪ್ರಸ್ತುತ ಮಡಗಾಂವ್ ಮತ್ತು ಮಂಗಳೂರು ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಉಡುಪಿ, ಕುಂದಾಪುರ ಹಾಗೂ ಕಾರವಾರ ಮಾರ್ಗವಾಗಿ ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಪರಿಷ್ಕೃತ ವೇಳಾಪಟ್ಟಿಯಂತೆ ಈ ರೈಲು 26655/26656 ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಸಂಚರಿಸಲಿದೆ ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
