ಹಾವಂಜೆ : ಗ್ರಾಮದ ನಾಲ್ಕನೇ ವಾರ್ಡಿನ ಕೀಳಂಜೆ ಕೊಂಕಣ ಪರಾರಿ ಪ್ರದೇಶದಲ್ಲಿ ಸುಮಾರು 20ರಿಂದ 25 ವರ್ಷಗಳಷ್ಟು ಹಳೆಯದಾಗಿದ್ದ ಮೆಸ್ಕಾಂ ವಿದ್ಯುತ್ ಪರಿವರ್ತಕ (ಟಿಸಿ) ಮತ್ತು ಅದರ ಪರಿಕರಗಳಿಂದಾಗಿ ಸ್ಥಳೀಯ ರೈತರು, ಸಾರ್ವಜನಿಕರು ಹಾಗೂ ವಸತಿ ಪ್ರದೇಶದ ನಿವಾಸಿಗಳು ಹಲವು ವರ್ಷಗಳಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದರು.
ಹಳೆಯ ಟಿಸಿಯಿಂದಾಗಿ ಪದೇಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿತ್ತು. ಇದರಿಂದ ಕೃಷಿ ಭೂಮಿಗಳಿಗೆ ನೀರು ಹಾಯಿಸಲು ರೈತರಿಗೆ ತೊಂದರೆಯಾಗುತ್ತಿತ್ತು. ಅಲ್ಲದೆ, ಮಳೆಗಾಲದಲ್ಲಿ ಟಿಸಿಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡು ಸುತ್ತಮುತ್ತಲಿನ ಪ್ರದೇಶದ ಜನರು ಸಮಸ್ಯೆ ಅನುಭವಿಸುತ್ತಿದ್ದರು.
ಈ ಗಂಭೀರ ಸಮಸ್ಯೆಯನ್ನು ಮನಗಂಡ ಸ್ಥಳೀಯ ಸಾರ್ವಜನಿಕರು, ರೈತರು ಹಾಗೂ ನಿವಾಸಿಗಳು ಸಾಮಾಜಿಕ ಕಾರ್ಯಕರ್ತ ಮತ್ತು ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ಅವರ ಗಮನಕ್ಕೆ ತಂದಿದ್ದರು. ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ಅವರು, ಬ್ರಹ್ಮಾವರ ಮತ್ತು ಉಡುಪಿ ಮೆಸ್ಕಾಂ ಅಧಿಕಾರಿಗಳು ಹಾಗೂ ಸ್ಥಳೀಯ ಲೈನ್ಮ್ಯಾನ್ಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ನಿರಂತರ ಪ್ರಯತ್ನ ಆರಂಭಿಸಿದರು.
ಸುಮಾರು ಒಂದು ವರ್ಷದ ಸತತ ಪ್ರಯತ್ನದ ಫಲವಾಗಿ ಇದೀಗ ಹಳೆಯ ವಿದ್ಯುತ್ ಟಿಸಿಯನ್ನು ಬದಲಾಯಿಸಿ ಹೊಸ ಟಿಸಿ ಪರಿಕರಗಳು ಹಾಗೂ ಹೊಸ ಕಾಂಕ್ರೀಟ್ ವಿದ್ಯುತ್ ಕಂಬವನ್ನು ಅಳವಡಿಸಲಾಗಿದೆ. ಈ ಕಾಮಗಾರಿಗೆ ಅಗತ್ಯವಿರುವ ಎಲ್ಲಾ ಹೊಸ ಸಾಮಗ್ರಿಗಳನ್ನು ಬಳಸಿ ವಿದ್ಯುತ್ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ನವೆಂಬರ್ 27ರಂದು ಬೆಳಿಗ್ಗೆ 8.30ರಿಂದ ಸಂಜೆ 6.30ರವರೆಗೆ ಸತೀಶ್ ಪೂಜಾರಿ ಕೀಳಂಜೆ ಅವರು ಸ್ಥಳದಲ್ಲೇ ಇದ್ದು ಕಾಮಗಾರಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಂಡರು.
ಇದರಿಂದ ಮುಂದಿನ ದಿನಗಳಲ್ಲಿ ಈ ಪರಿಸರದ ರೈತರು, ಸಾರ್ವಜನಿಕರು ಹಾಗೂ ವಸತಿ ಪ್ರದೇಶದ ನಿವಾಸಿಗಳಿಗೆ ವಿದ್ಯುತ್ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸತೀಶ್ ಪೂಜಾರಿ ಅವರ ಕಾರ್ಯಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಹಿರಿಯ ಗಣ್ಯರು ಹಾಗೂ ಉದ್ಯಮಿ ಆತ್ಮರಾಮ್ ಪಾಟೀಲ್, “ಸತೀಶ್ ಪೂಜಾರಿ ಕೀಳಂಜೆ ಅವರು ಸುಮಾರು 25 ವರ್ಷಗಳಿಂದ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕರ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಗೆ ಸ್ಪಂದಿಸಿ ಹಲವು ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಕೀಳಂಜೆ ಶ್ರೀ ಹರಿಹರ ದೇವಸ್ಥಾನದ ಸಮೀಪದ ನಾಲ್ಕನೇ ವಾರ್ಡಿನಲ್ಲಿಯೂ ಹೊಸ ವಿದ್ಯುತ್ ಟಿಸಿ ಅಳವಡಿಸಲು ಅವರು ಸಹಕರಿಸಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಬೇಕಾದ ಹಲವು ಸಾರ್ವಜನಿಕ ಕೆಲಸಗಳನ್ನು ಸಾಮಾಜಿಕ ಕಾರ್ಯಕರ್ತರಾಗಿ ಮುಂದೆ ನಿಂತು ಮಾಡುತ್ತಿರುವುದು ಶ್ಲಾಘನೀಯ. ಕೊಂಕಣ ಪರಾರಿ ಭಾಗದ ದೀರ್ಘಕಾಲದ ವಿದ್ಯುತ್ ಸಮಸ್ಯೆ ಪರಿಹಾರವಾಗಿರುವುದು ನಮಗೆಲ್ಲರಿಗೂ ಸಂತಸ ತಂದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆತ್ಮರಾಮ್ ಪಾಟೀಲ್, ಜ್ಯೋತಿ ಪಾಟೀಲ್, ವಿಜಯ ಪಾಟೀಲ್, ಸುಂದರ್ ನಾಯ್ಕ್, ಸತೀಶ್ ಪೂಜಾರಿ ಬಾಣಬೆಟ್ಟು, ಹೆನ್ರಿ ಡಿಸೋಜಾ, ಸುನೀತಾ ಪೂಜಾರ್ತಿ, ಸುನಂದಾ ಪೂಜಾರ್ತಿ, ಜಗ್ಗು ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

