ಪ್ರೀತಿ ವಿವಾಹದ ಪ್ರತೀಕಾರ : ಗರ್ಭಿಣಿ ಮಗಳ ಹತ್ಯೆ ಮಾಡಿದ ತಂದೆ

0
167

ಧಾರವಾಡ : ಮಾನ್ಯ ಮತ್ತು ವೀವೆಕಾನಂದ ಇಬ್ಬರೂ ಕಾಲೇಜು ಓದುವಾಗಲೇ ಪ್ರೀತಿಸಿದ್ದರು. ಆದರೆ ಅವರ ಪ್ರೀತಿಗೆ ಜಾತಿ ಅಡ್ಡಗೋಡೆಯಾಗಿತ್ತು. ಹೆತ್ತವರ ವಿರೋಧದ ನಡುವೆಯೂ ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇದೇ ಕೋಪಕ್ಕೆ ಏಳು ತಿಂಗಳ ಗರ್ಭಿಣಿಯಾಗಿದ್ದ ಮಗಳನ್ನು ಹೆತ್ತ ತಂದೆಯೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ. ಇನಾಂ ವೀರಾಪುರ ಗ್ರಾಮದ ವಿವೇಕಾನಂದ ಮತ್ತು ಅದೇ ಗ್ರಾಮದ ಮಾನ್ಯಾ ಅನೇಕ ವರ್ಷಗಳ ಕಾಲ ಪ್ರೀತಿಸಿದ್ದರು. ಇಬ್ಬರು ಪ್ರೀತಿಸುತ್ತಿದ್ದ‌ ವಿಚಾರ ಎರಡು ಮನೆಯವರಿಗೆ ಗೊತ್ತಾಗಿತ್ತು. ಯುವತಿ ಲಿಂಗಾಯತ ಸಮಾಜದವಳಾಗಿದ್ದರೆ ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದ್ದ. ಹೀಗಾಗಿ ಯುವತಿ ಮನೆಯವರು ಮದುವೆಗೆ ವಿರೋಧ ಮಾಡಿದ್ದರು. ಆದರೆ, ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದ ಬಿಟ್ಟು ಬದಕೋದಿಲ್ಲಾ ಎಂದು ಹಠ ಹಿಡಿದಿದ್ದಳು.ಧಾರವಾಡದಲ್ಲಿ ಕೋಚಿಂಗ್​ಗೆ ಹೋಗಿದ್ದ‌ ವಿವೇಕಾನಂದ ಬಳಿ ಹೋಗಿ, ಮದುವೆಯಾಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಹೀಗಾಗಿ ವಿವೇಕಾನಂದ ಆಕೆ ಜೊತೆ ಕಳೆದ ಜೂನ್ 19 ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದ.

ಎರಡು ಕುಟುಂಬಗಳ ನಡುವೆ ರಾಜಿ ಸಂಧಾನ ಮಾಡಿದ್ದ ಪೊಲೀಸರು ರಿಜಿಸ್ಟರ್ ವಿವಾಹದ ನಂತರ ಪೊಲೀಸರು ಎರಡೂ ಕುಟುಂಬಗಳನ್ನು ಕರೆದು ರಾಜಿ ಪಂಚಾಯತಿ ಮಾಡಿದ್ದರು. ಆ ಬಳಿಕ ಮಾನ್ಯಾ ಮತ್ತು ವಿವೇಕಾನಂದ ಊರು ಬಿಟ್ಟು ಹೋಗಿ ಹಾವೇರಿಯಲ್ಲಿ ವಾಸವಾಗಿದ್ದರು. ಈ ನಡುವೆ ಮಾನ್ಯಾ ಗರ್ಭಿಣಿಯಾಗಿದ್ದಾಳೆ. 7 ತಿಂಗಳ ಬಳಿಕ ಎಲ್ಲ ಸರಿಹೋಗಿರಬಹುದು ಎಂದುಕೊಂಡು ಡಿಸೆಂಬರ್ 8 ರಂದು ಇಬ್ಬರೂ ಸ್ವಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಆದರೆ, ಮತ್ತೆ ಕಿರಿಕ್ ಶುರುವಾಗಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರನ್ನೂ ಕರೆಸಿ, ರಾಜಿ ಸಂದಾನ ಮಾಡಿಸಿದ್ದಾರೆ. ಆದರೆ ಇದಾದ ಎರಡೇ ವಾರಕ್ಕೆ ನಡೆಯಬಾರದ್ದು ನಡೆದುಹೋಗಿದೆ. ಭಾನುವಾರ ಸಂಜೆ ಮತ್ತೆ ವಿವೇಕಾನಂದನ ಮನೆ ಮೇಲೆ ದಾಳಿ ಮಾಡಿದ ಮಾನ್ಯ ತಂದೆ ಪ್ರಕಾಶಗೌಡ ಪಾಟೀಲ್ ಮತ್ತು ಸಂಬಂಧಿಗಳು ಮಾನ್ಯಾ ಮತ್ತು ಮನೆಯಲ್ಲಿದ್ದ ಆಕೆಯ ಅತ್ತೆ ಸೇರಿದಂತೆ ಮೂ‌ವರ ಮೇಲೆ ಹಲ್ಲೆ ಮಾಡಿದ್ದಾರೆ. ಮಾನ್ಯಳಿಗೆ ಪೈಪ್ ಮತ್ತು ಗುದ್ದಲಿಯಿಂದ ಪ್ರಕಾಶಗೌಡ ಹಲ್ಲೆ ಮಾಡಿದ್ದಾನೆ. ನಂತರ ಮಾನ್ಯಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾನ್ಯಾ ಇಹಲೋಕ ತ್ಯಜಿಸಿದ್ದಾಳೆ. ಇತ್ತ ಮಾನ್ಯಾಳ ಅತ್ತೆ, ಮಾವ ಸೇರಿ ಮೂವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಎಸ್​​ಪಿ ಗುಂಜನ್ ಆರ್ಯ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾನ್ಯಾಳ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. .

LEAVE A REPLY

Please enter your comment!
Please enter your name here