ರೋಟರಾಕ್ಟ್ ಕ್ಲಬ್, ಮಂಗಳೂರು ಸಿಟಿ : ನಾಯಕತ್ವ ಗುಣ ಬೆಳೆಸಿ ಯಶಸ್ಸು ಸಾಧಿಸಿ

0
24

ಮಂಗಳೂರು : “ರೋಟರಾಕ್ಟ್ ಸಂಸ್ಥೆಯು ಕೇವಲ ಯುವಕರ ಅನುಕೂಲಕ್ಕಾಗಿ ಸ್ಥಾಪಿಸಿದ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಯುವಕರ ನಾಯಕತ್ವ ಗುಣಗಳ ಬೆಳವಣಿಗೆ, ವ್ಯಕ್ತಿತ್ವ ವಿಕಸನಗಳನ್ನು ರೂಪಿಸುವ ಸಂಸ್ಥೆಯಾಗಿದ್ದು, ಯುವಕರು ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಮಾಜ ಸೇವಾ ಚಟುವಟಿಕೆಗಳಲ್ಲಿ ಒಗ್ಗಟ್ಟಾಗಿ ಶ್ರಮಿಸಿ ಯಶಸ್ಸು ಸಾಧಿಸ ಬೇಕು” ಎಂದು ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷರಾದ ಬಿ. ಎನ್. ರವೀಂದ್ರ ಸಲಹೆ ನೀಡಿದ್ದಾರೆ. ಅವರು ನಗರದ ಹೋಟೇಲ್ ಸೀವ್ಯೂ ಸಭಾಂಗಣದಲ್ಲಿ ಜರಗಿದ ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ತಂಡಕ್ಕೆ ಶುಭಕೋರಿದರು.

ಸಂಸ್ಥೆಯ ಸಭಾಪತಿಯವರಾದ ಡಾ| ದೇವದಾಸ್ ರೈಯವರು ನೂತನ ತಂಡಕ್ಕೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಶುಭ ಕೋರಿದರು.

ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ರಕ್ಷಣ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ ಕ್ಷೇತ್ರ, ಪರಿಸರ ಸಂರಕ್ಷಣೆ, ವಸತಿ ಮತ್ತು ಸಮಾಜದ ಮೂಲಭೂತ ಸೌಕರ್ಯಗಳ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವ ಸದಸ್ಯರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ೪ ನೂತನ ಸದಸ್ಯರನ್ನು ಕು| ದೀಪ್ತಿ, ಕು| ಹರ್ಷಿತಾ, ನಿಶಾಂತ್ ಮತ್ತು ರಂಜನ್‌ರವರನ್ನು ಸಂಸ್ಥೆಗೆ ಸೇರ್ಪಡಿಸಲಾಯಿತು.

ಸಂಸ್ಥೆಯ ಸ್ಥಾಪನಾ ಅಧ್ಯಕ್ಷರಾದ ಜಯಪ್ರಕಾಶ್ ರಾವ್‌ರವರು ಸಂಸ್ಥೆಯು 3 ದಶಕಗಳಲ್ಲಿ ಸಾಧಿಸಿದ ಸಾಧನೆಗಳ ಮಾಹಿತಿ ನೀಡಿ ಸಂಸ್ಥೆಯನ್ನು ಶ್ಲಾಘಿಸಿದರು.

ನಿರ್ಗಮನ ಅಧ್ಯಕ್ಷ ಅಕ್ಷಯ್ ರೈ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ವಿವೇಕ್ ರಾವ್ ವಾರ್ಷಿಕ ವರದಿ ಮಂಡಿಸಿದರು. ಕು| ಅಲ್ಮಾ ಪಿಂಟೋ ಮತ್ತು ಡೆರಿಲ್ ಸ್ಟೀವನ್ ಡಿಸೋಜ ನಿರೂಪಿಸಿದ ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿ ಮುಕೇಶ್ ವಂದಿಸಿದರು.

ನಿರ್ದೇಶಕರು : ಮಣಿಕಂಠ (ಸಂಸ್ಥೆ ಸೇವೆ), ಶಮನ್ (ವೃತ್ತಿಪರ ಸೇವೆ), ವಿವೇಕ್ ರಾವ್ (ಅಂತಾರಾಷ್ಟ್ರೀಯ ಸೇವೆ), ಶ್ರದ್ಧಾ ಕೇಶವ್ (ಸಮುದಾಯ ಸೇವೆ), ಕದ್ರಿ ವಿಕ್ರಮ್ (ಯುವಜನ ಸೇವೆ), ಪ್ರತೀಕ್ ಶೆಟ್ಟಿ (ಕೋಶಾಧಿಕಾರಿ), ಮಹಮ್ಮದ್ ಮನ್ಸೂರ್ (ದಂಡಾಧಿಕಾರಿ)