ಉಳ್ಳಾಲ : ಮಾರ್ಚ್ 27ರಂದು ಉಳ್ಳಾಲದ ತೊಕ್ಕೊಟ್ಟಿನ ಫೈಓವರ್‌ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ರೌಡಿ ಶೀಟರ್, ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯದಲ್ಲಿ ನೇರ ಶಾಮೀಲಾದ 6 ಆರೋಪಿಗಳು ಸಹಿತ ಒಟ್ಟು ಏಳು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಪ್ರಕರಣದ ಆರೋಪಿಗಳಾದ ರಿಫಾತ್, ಜುಟ್ಟು ಅಲ್ಪಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಝಾನ್ ಹಾಗೂ ಕೊಲೆಕೃತ್ಯಕ್ಕೆ ಸಹಕರಿಸಿದ ಇರ್ಷಾದ್ ಎಂಬಾತನನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿನಷರ್ ತಿಳಿಸಿದ್ದಾರೆ.
ಬೆಳಗ್ಗೆ ದಕ್ಕೆ ಮೀನು ಮಾರುಕಟ್ಟೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಆರಿಫ್‌ನನ್ನು ತೊಕ್ಕೊಟ್ಟು ಫೈ ಓವರ್ ಬಳಿ ತಂಡವೊಂದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿತ್ತು.
ರಿಫಾತ್, ಜುಟ್ಟು ಅಶ್ನಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಝಾನ್ ಸೇರಿದಂತೆ ಆರು ಮಂದಿ ಆರೋಪಿಗಳು ಕಾರಿನಲ್ಲಿ ಆರಿಫ್‌ನ ಬೈಕನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ತೊಕ್ಕೊಟ್ಟು ಪ್ರೈ ಓವರ್ ಬಳಿ ನಿರ್ಜನ ಪ್ರದೇಶದಲ್ಲಿ ಆರಿಫ್ ಸಂಚರಿಸುತ್ತಿದ್ದ ಬೈಕಿಗೆ ಆರೋಪಿಗಳು ಹಿಂದಿನಿಂದ ಕಾರನ್ನು ಢಿಕ್ಕಿ ಹೊಡೆದ ಪರಿಣಾಮವಾಗಿ ಆರಿಫ್ ಕೆಳಗೆ ಬೀಳುತ್ತಿದ್ದಂತೆ ಆತನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಆರೋಪಿಗಳಿಗೆ ತಂಗಲು ವ್ಯವಸ್ಥೆ ಇರ್ಷಾದ್ ಮಾಡಿಕೊಟ್ಟಿದ್ದಲ್ಲದೆ, ಅವರನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಪೂರ್ವ ದ್ವೇಷವೇ ಕೊಲೆಗೆ ಕಾರಣ ಎಂದು ಗೊತ್ತಾಗಿದೆ.. ಕೊಲೆಗೆ ಬಳಸಲಾದ ಬಾಡಿಗೆ ಕಾರನ್ನು ಸುಹೈಲ್ ವ್ಯವಸ್ಥೆ ಮಾಡಿದ್ದು, ಕಾರನ್ನು ರಿಫಾತ್‌ಗೆ ನೀಡಿ ಈತ ಸೌದಿ ಅರೇಬಿಯಾಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಅರ್ಶದ್ ಎಂಬಾತ ಈ ತಂಡಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದನು. ಪೊಲೀಸರ ಚಲನವಲನದ ಮೇಲೆ ನಿಗಾ ಇರಿಸಿ, ಆರೋಪಿಗಳಿಗೆ ಕ್ಷಣ ಕ್ಷಣದ ಮಾಹಿತಿ ನೀಡುತ್ತಿದ್ದನು. ಅಲ್ಲದೆ ಆರೋಪಿಗಳು ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಅವರಿಗೆ ಹಣಕಾಸು ಮತ್ತು ವಾಹನದ ವ್ಯವಸ್ಥೆ ಮಾಡಿದ್ದನು ಎನ್ನಲಾಗಿದೆ. ತಾಂತ್ರಿಕವಾಗಿ ಪೊಲೀಸರ ಕಣ್ಣು ತಪ್ಪಿಸಲು ಅಶೀರ್ ಎಂಬಾತ ನೆರವಾಗಿದ್ದನು. ಈತ ದುಬೈನಿಂದ ಒಟಿಪಿ ಪಡೆದು ಆರೋಪಿಗಳಿಗೆ ಅಂತರ್ ರಾಷ್ಟ್ರೀಯ ವಾಟ್ಸಾಪ್ ಸಂಖ್ಯೆಗಳನ್ನು ಸಕ್ರಿಯಗೊಳಿಸಿ ಕೊಟ್ಟಿದ್ದನು. ಒಂದು ನಂಬರ್ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಮತ್ತೊಂದು ನಂಬರ್ ನೀಡಿ ಸಂವಹನ ಮುಂದುವರಿಯುವಂತೆ ನೋಡಿಕೊಂಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿದೇಶದಲ್ಲಿರುವ ಮುಸ್ತಫಾ ಮತ್ತು ಅಶೀರ್ ಆರೋಪಿಗಳ ತಲೆಮರೆಸಿಕೊಳ್ಳಲು ವಸತಿ ಮತ್ತು ಪ್ರಯಾಣದ ವೆಚ್ಚಕ್ಕೆ ಬೇಕಾದ ಹಣಕಾಸಿನ ನೆರವು ನೀಡುತ್ತಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿದೆ. ಹ*ತ್ಯಾ ಪ್ರಕರಣದಲ್ಲಿ ಇನ್ನೂ ಅನೇಕರು ಶಾಮೀಲಾಗಿರುವ ಸಂಶಯವಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.

